ಹೊನ್ನಾವರ: ‘ಗೋವು ಮನುಷ್ಯನ ಆರೋಗ್ಯ ಹಾಗೂ ಆದಾಯದ ಮೂಲವಾಗಿದೆ. ಗೋ ಸಾಕಣೆ ನಮ್ಮ ಧರ್ಮವಾಗಬೇಕಿದೆ’ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ, ನಗರಬಸ್ತಿಕೇರಿ ಗ್ರಾಮ ಪಂಚಾಯ್ತಿ ಹಾಗೂ ಶ್ರೀವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ, ಅಮೃತಧಾರಾ ಗೋಶಾಲೆ, ಶ್ರೀಕ್ಷೇತ್ರ ಬಂಗಾರಮಕ್ಕಿ ಸಂಯುಕ್ತ ಅಶ್ರಯದಲ್ಲಿ ಗುರುವಾರ ನಡೆದ ‘ಮಿಶ್ರ ತಳಿ ಆಕಳು ಮತ್ತು ಕರುಗಳ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಗೋಮೂತ್ರ ಹಾಗೂ ಸಗಣಿ ಬಳಕೆಯಿಂದ ಉತ್ಕೃಷ್ಟ ಕೃಷಿ ಸಾಧ್ಯ. ಸಾವಯವ ಗೊಬ್ಬರ ಬಳಕೆಯಿಂದ ಆರೋಗ್ಯ ಪೂರ್ಣ ಬೆಳೆ ಪಡೆಯಲು ಸಾಧ್ಯ. ಮನೆಯ ಎದುರು ಸಗಣಿ ಮತ್ತು ಗೋಮೂತ್ರವನ್ನು ಹಾಕಿ ಸಾರಿಸಿದರೆ ಬ್ಯಾಕ್ಟೀರಿಯಾಗಳು ನಾಶ ಆಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ವಿಧಾನಗಳನ್ನು ಅನುಸರಿಸಿದ್ದರಿಂದ ನಮ್ಮ ಪೂರ್ವಜರು ಆರೋಗ್ಯವಂತರಾಗಿರುತ್ತಿದ್ದರು’ ಎಂದರು.
ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ನಾರಾಯಣ ಹೆಗಡೆ ಮಾತನಾಡಿ, ‘ಗೋವುಗಳ ಸಾಕಾಣಿಕೆಯ ಉಪಯೋಗದ ಬಗ್ಗೆ ಜನರಲ್ಲಿ ಅರಿವು ಮೂಡಬೇಕಿದೆ. ಗೋಸಾಕಣೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವರಿಗೆ ಉದ್ಯೋಗ ನೀಡುತ್ತದೆ’ ಎಂದು ಹೇಳಿದರು.
ಡಾ.ಸುಪ್ರಿಯಾ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯರಾದ ರಾಘವೇಂದ್ರ ನಾಯ್ಕ, ಗೋವಿಂದ ನಾಯ್ಕ, ಡಾ.ಶಶಿಭೂಷಣ, ಎಸ್.ಎಲ್. ಭಟ್ ಸರಳಗಿ ಉಪಸ್ಥಿತರಿದ್ದರು.