ಕಾರವಾರ: ಇದೇ ಬರುವ ಡಿ. 6 ಮತ್ತು 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಸರ್ಕಾರದಿಂದ ವಿವಿಧ ಇಲಾಖೆಗಳ ಅಡಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಹಾಗೂ ಹತ್ತು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ವಿಧಾನಸಭಾ ವಾರು ಯಾವ ಕ್ಷೇತ್ರದಲ್ಲಿ ಎಷ್ಟು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಅವುಗಳಿಗೆ ಮೀಸಲಿಟ್ಟ ಹಣ ಎಷ್ಟು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಇಂದು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 2468 ಕೋಟಿ ರೂ. ವೆಚ್ಚದ 519 ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. ಇವುಗಳಲ್ಲಿ ಕೆಲ ಕಾಮಗಾರಿಗಳು ಎರಡು ವರ್ಷದ ಹಿಂದೆಯೇ ಪೂರ್ಣಗೊಂಡಿದ್ದು, ಅವುಗಳ ಬಳಕೆ ಸಹ ಆರಂಭವಾಗಿದೆ. ಸಂಪ್ರದಾಯದಂತೆ ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ದೊಡ್ಡ ಮೊತ್ತದ ಯೋಜನೆಗಳಾಗಿದ್ದು, ಅವು ಉದ್ಘಾಟನಾ ಕಾರ್ಯಕ್ರಮದ ಪಟ್ಟಿಯಲ್ಲಿವೆ.
ಜಿಲ್ಲೆಯಲ್ಲಿ ಹಲವು ಸೇತುವೆಗಳ ಮತ್ತು ಹಲವು ಕೋಟಿ ವೆಚ್ಚದ ರಸ್ತೆಯ ಕಾಮಗಾರಿಗಳು, ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆ ಅಡಿ ಗ್ರಾಮೀಣ ರಸ್ತೆಗಳು ಮತ್ತು ಮುಖ್ಯಮಂತ್ರಿ ಗ್ರಾಮ ಅಭಿವೃದ್ಧಿ ಯೋಜನೆಯ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 67 ಕಾಮಗಾರಿಗಳಿಗೆ 70757.27 ಲಕ್ಷ ರೂ. ಮೀಸಲಿಡಲಾಗಿದೆ. ಈ ಕಾಮಗಾರಿಗಳಲ್ಲಿ ಮೆಡಿಕಲ್ ಕಾಲೇಜು 250 ಕೋಟಿ ರೂ. ಬೃಹತ್ ಮೊತ್ತದ ಕಾಮಗಾರಿ ಮುಗಿದಿದೆ. ಮೆಡಿಕಲ್ ಕಾಲೇಜು ಬಳಕೆ ಸಹ ಆರಂಭವಾಗಿದೆ. 100 ಕೋಟಿ ಗೂ.ಮೀರಿದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎರಡು ಬೃಹತ್ ಕಟ್ಟಡಗಳು ಮುಗಿದು ಬಳಕೆಗೆ ಸಿದ್ಧವಾಗಿದೆ. ಉಳಿದ ಎರಡು ಕಟ್ಟಡ ಕಾಮಗಾರಿ ಮುಕ್ತಾಯ ಹಂತದಲ್ಲಿವೆ. ಹಾಸ್ಟೆಲ್ ಕಟ್ಟಡ ಇನ್ನು ನಿರ್ಮಾಣವಾಗಬೇಕಿದೆ. ಜಲ ಸಾಹಸಿಗಳಿಗೆ ಮೀಸಲಾದ ಕ್ರೀಡಾ ವಸತಿ ನಿಲಯ ಕಾಳಿ ನದಿ ದಂಡೆಯಲ್ಲಿ ತಲೆ ಎತ್ತಿದ್ದು ಈ ನೂತನ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಲಿದ್ದಾರೆ.
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ 53 ಕಾಮಗಾರಿಗಳ 17897.96 ಲಕ್ಷ ರೂ ಮೀಸಲಿಡಲಾಗಿದೆ. ಭಟ್ಕಳ ವಿಧಾನಸಭಾ ಕ್ಷೇತ್ರದ 126 ಕಾಮಗಾರಿಗಳಿಗೆ 90431.14 ಲಕ್ಷ ರೂ., ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 56 ಕಾಮಗಾರಿಗಳಿಗೆ 14873.85 ಲಕ್ಷ ರೂ.ಗಳನ್ನು, ಯಲ್ಲಾಪುರ ವಿಧಾನಸಭಾ ಕ್ಷೇತ್ರದ 131 ಕಾಮಗಾರಿಗಳಿಗೆ 28823.40 ಲಕ್ಷ ರೂ.ಗಳನ್ನು, ಹಳಿಯಾಳ ವಿಧಾನಸಭಾ ಕ್ಷೇತ್ರದ ವಿವಿಧ 86 ಕಾಮಗಾರಿಗಳಿಗೆ 24056.93 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.
ಕಾರ್ಯಕರ್ತರಲ್ಲಿ ಹುಮ್ಮಸ್ಸು:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರವಾಸ ಸಹಜವಾಗಿ ಆಡಳಿತ ಪಕ್ಷ ಕಾಂಗ್ರೆಸ್‍ನ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದೆ. ಕರಾವಳಿಯಲ್ಲಿ ಪಕ್ಷದ ಬಲವನ್ನು ಉಳಿಸಿಕೊಳ್ಳಬೇಕಾದ ಹಾಗೂ ಕಾಪಾಡಿಕೊಳ್ಳಬೇಕಾದ ಕಾರ್ಯವನ್ನು ಕಾಂಗ್ರೆಸ್ ಪ್ರಾರಂಭಿಸಿದೆ. ಕಾಂಗ್ರೆಸ್ ಮನೆ ಮನೆಯ ಭೇಟಿ ನಂತರ, ಬಿಜೆಪಿ ಪರಿವರ್ತನಾ ಯಾತ್ರೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಎರಡು ದಿನ ಜಿಲ್ಲಾ ಪ್ರವಾಸ ಮಾಡಿಸಿ, ಅಭಿವೃದ್ಧಿ ಮಂತ್ರ ಜಪಿಸಲು ಮುಂದಾಗಿದೆ.