ಕುಮಟಾ: ಅಭಯಗೋಯಾತ್ರೆಯೆನ್ನುವುದು ಗೋರಕ್ಷೆಯ ಮಹಾಸುನಾಮಿ. ಗೋರಕ್ತಮುಕ್ತಭಾರತದ ಸಾಕಾರಕ್ಕಾಗಿ ಈ ಮಹಾಯಾತ್ರೆ ಎಂದು ಶ್ರೀಮದ್ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಆವರಣದಲ್ಲಿ ನಡೆದ ಅಭಯಗೋಯಾತ್ರೆಯ ಶುಭಾರಂಭ ಸಮಾರಂಭವನ್ನುದ್ದೇಶಿಸಿ ಗೋಸಂದೇಶವನ್ನು ಅನುಗ್ರಹಿಸಿದ ಶ್ರೀಗಳು, ದತ್ತಜಯಂತಿಯಂದು ಕುಮಟಾದಲ್ಲಿ ಗೋಯಾತ್ರೆಯ ಉದ್ಘಾಟನೆ ನಡೆದದ್ದು ವಿಶೇಷ. ಗೋಮಾತೆಯ ಕ್ಷೀರಾಮೃತ ಕುಂಭವೇ ಕುಮಟಾದ ಕುಂಭ ಪದದ ವ್ಯುತ್ಪತ್ತಿ ತಾತ್ಪರ್ಯವಾಗಿದೆ. ತನ್ನೆಲ್ಲಾ ಚೈತನ್ಯವನ್ನು ದತ್ತ ಪ್ರಪಂಚಕ್ಕೆ ಹಂಚಿದರೆ, ತನ್ನ ಅಮೃತಸದೃಶ ಕ್ಷೀರವನ್ನಿತ್ತವಳು ಗೋಮಾತೆ. ಗೋವು ಕೇವಲ ಚಿತ್ರವಾಗಿ ಉಳಿಯುವಂತಾಗದೇ ಚಿತ್ತದಲ್ಲೂ ಸುತ್ತಲಲ್ಲೂ ಕಂಗೊಳಿಸುವಂತಾಗಬೇಕು ಎಂದರು.
ಶ್ರೀಗಳು ಅಭಯ ಚಕ್ರಕ್ಕೆ ಚಾಲನೆ ನೀಡಿದರು.
ಕೇವಲ ಒಂದೇ ಒಂದು ಹಸ್ತಾಕ್ಷರದಿಂದ ಹಿಂದೆಯೇ ಕೋಟಿ ಕೋಟಿ ಗೋವುಗಳ ಮಾರಣಹೋಮವನ್ನು ಆಳುವವರು ತಡೆಯಬಹುದಿತ್ತು. ಆದರೆ ಗೋಹತ್ಯೆಯ ನಿಷೇಧಕ್ಕಾಗಿ ಸಮಾಜವೇ ಮನಮಾಡಿ, ಕೋಟ್ಯಂತರ ಗೋಪ್ರೇಮ ಪತ್ರದ ಅಂಕಿತದ ಮೂಲಕ ಈ ಕಾರ್ಯ ಮಾಡಲೇಬೇಕಿರುವ ಅನಿವಾರ್ಯ ಸಮಯವಿದು. ಅದಕ್ಕಾಗಿ ಅಭಯಗೋಯಾತ್ರೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಸುರೇಶ ಭಟ್ಟ ರಕ್ತದಿಂದ ಬರೆದ ಅಭಯಾಕ್ಷರದ ಮನವಿ ಸಮರ್ಪೀಸಿದರು..
ರಕ್ತದಲ್ಲಿ ಪತ್ರ ಬರೆದು ಗೋವನ್ನು ಉಳಿಸುವ ಶ್ರೇಷ್ಟರು ಕುಮಟಾದ ನೆಲದಲ್ಲಿರುವುದು ಹೆಮ್ಮೆಯ ವಿಚಾರ. ಆ ದೃಷ್ಟಿಯಿಂದ ಈ ಬಗೆಯ ರಕ್ತಪತ್ರವೆನ್ನುವುದು ಸ್ವರ್ಣಪತ್ರಕ್ಕಿಂತಲೂ ಅತ್ಯಂತ ಹೆಚ್ಚಿನದ್ದು ಎಂದು ಗೋಸಂದೇಶ ನೀಡಿದರು.
ಅಭಯಗೋಯಾತ್ರೆಯ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಮದ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಗೋವಿಗಾಗಿ ಆಂದೋಲನವೆನ್ನುವ ಇತಿಹಾಸವೇ ಇಲ್ಲ. ಆದರೆ ಶ್ರೀರಾಮಚಂದ್ರಾಪುರಮಠದ ಇತಿಹಾಸದ ಭಾಗವಾಗಿರುವ ಹಿಂದಿನೆಲ್ಲದರ ಮುಂದುವರಿಕೆಯಾಗಿ ಅಭಯಗೋಯಾತ್ರೆ. ರಾಜ್ಯಸರ್ಕಾರ ಹಾಗೂ ಕೇಂದ್ರಸರ್ಕಾರಕ್ಕೆ ಸಂಪೂರ್ಣ ಗೋಹತ್ಯಾ ನಿಷೇಧ ಮಾಡುವ ಒತ್ತಾಯ ಹೇರುವ ಸಲುವಾಗಿ ಈ ಅರ್ಜಿಯ ಅಭಿಯಾನ ನಡೆಯಲಿದೆ. ಸಂಪೂರ್ಣ ಭಾರತದ ಜಾಗೃತಿಗಾಗಿ ಈ ಯಾತ್ರೆ. ಪೂರ್ವಾಗ್ರಹವಿಲ್ಲದೇ ರೈತ, ಗೋವು, ಸಂತಶಕ್ತಿಯ ಸಮ್ಮಿಲನದ ಸಾಕಾರಕ್ಕಾಗಿ ಈ ಯಾತ್ರೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಈ ಜಾಗೃತಿ ಯಾತ್ರೆ ಸಂಚಲನ ಮೂಡಿಸಲಿದೆ. ಪ್ರಜೆಗಳಿಂದ ಆರಂಭವಾಗಿ ಆಳುವವರ ಹಸ್ತಾಕ್ಷರದೊಂದಿಗೆ ಸಮಾಪನಗೊಳ್ಳಲಿರುವುದು ಈ ಗೋಯಾತ್ರೆ. ಈ ನಿಟ್ಟಿನಲ್ಲಿ ಅಭಯಗೋಯಾತ್ರೆಯೆಂಬುದೊಂದು ಆಳುವವರ ಮಸ್ತಿಷ್ಕವನ್ನು ತೊಳೆಯುವ, ಬುದ್ಧಿಯನ್ನು ಶುದ್ದಗೊಳಿಸುವ ಮಹಾಪ್ರವಾಹ ಎಂದರು.
ಕರ್ನಾಟಕ ಸರ್ಕಾರದ ಮೇಲೆ ಭರವಸೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಸರ್ಕಾರ ಬದಲಾಗುವಂತದ್ದು. ಜನರ ಮನಸ್ಥಿತಿ ಬದಲಾವಣೆ ಆದರೆ ಖಂಡಿತಾ ಗೋಹತ್ಯೆ ನಿಷೇಧವಾಗುತ್ತದೆ ಎಂದರು.
ಮುರಳೀಧರ್ ಪ್ರಭುರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಈ ಗೋಯಾತ್ರೆ ಐತಿಹಾಸಿಕ ಕ್ಷಣದ ಮುನ್ನುಡಿಯಾಗಲಿರುವಂತದ್ದು. ತಳಹಂತದ ಎಲ್ಲರ ಧ್ವನಿಯನ್ನು ಆಳುವ ವರ್ಗಕ್ಕೆ ಸಲ್ಲಿಸಲು ಈ ಯಾತ್ರೆ. ಮಹಾತ್ಮರ ಮಹದೋದ್ದೇಶ ಸಫಲಗೊಳಿಸುವ ಸಲುವಾಗಿ ಈ ಯಾತ್ರೆ. ಶ್ರದ್ಧೆ, ನಂಬಿಕೆಗಳ ಬಗ್ಗೆ ಮಾತನಾಡಿದರೆ ‘ಕೆಲ’ವರು ಭಾವನಾತ್ಮಕ ಬ್ಲಾಕ್ ಮೇಲ್ ಎಂಬರ್ಥದಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ಗೋಹತ್ಯೆಯ ವಿರುದ್ಧದ ನಿಲುವು ಸಂವಿಧಾನಬದ್ಧವಾದದ್ದು ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಹಾಗಾಗಿ ಗೋಕೈಂಕರ್ಯದ ಪತ್ರಸಲ್ಲಿಕೆಯ ಮಹಾಂದೋಲನವೇ ಈ ಅಭಯಗೋಯಾತ್ರೆ ಎಂದರು.
ಕೂಡ್ಲಿ ಶೃಂಗೇರಿ ಮಠದ ವಿದ್ಯಾಭಿನವ ವಿದ್ಯಾರಣ್ಯ ಮಹಾಸ್ವಾಮಿಗಳು ಮಾತನಾಡಿ, ವೇದಕಾಲದಿಂದಲೂ ಗೋಮಹತಿಯನ್ನು ಸಾರುವ ಕಾರ್ಯ ನಡೆದಿದೆ. ಸಂವಿಧಾನದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಸುಪ್ರೀಂ ಕೋರ್ಟ್ ನ ಆದೇಶ ಕೂಡಾ ಮಾನ್ಯ ಮಾಡುವಲ್ಲಿ ಸರ್ಕಾರ ಕಾಳಜಿ ವಹಿಸಿಲ್ಲ. ಇದನ್ನು ನಿರ್ದೇಶಿಸುವ ಸಲುವಾಗಿ ನಡೆಯುತ್ತಿರುವ ಪ್ರಕೃತ ಅಭಯಗೋಯಾತ್ರೆ ಗೋಸಂರಕ್ಷಣೆಯ ದೃಷ್ಟಿಯಿಂದ ಮಹತ್ತರ ಹೆಜ್ಜೆಯಾಗಿದೆ ಎಂದರು.
ಶ್ರೀ ಷ.ಬ್ರ. ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹುಣ್ಣಿಮೆಯ ಚಂದ್ರ ಅಮವಾಸ್ಯೆಯತ್ತ ಹೋಗುವಾಗ ಕ್ಷೀಣಿಸುವವನಾದರೆ, ರಾಮಚಂದ್ರಾಪುರಮಠದ ಶ್ರೀರಾಮಚಂದ್ರ ಸದೃಶರಾದ ರಾಘವೇಶ್ವರ ಶ್ರೀಗಳ ವರ್ಚಸ್ಸು ಹಾಗೂ ಉತ್ಸಾಹ ದಿನಕಳೆದಂತೆ ಕಳೆಗಟ್ಟಿ ಕಂಗೊಳಿಸುವಂತದ್ದು. ದೇಶದ ಆರೋಗ್ಯ ಮತ್ತು ಆರ್ಥಿಕತೆಯ ವೃದ್ಧಿಗಾಗಿ ಅಭಯಗೋಯಾತ್ರೆ ಸಂಪನ್ನಗೊಳ್ಳುತ್ತಿದೆ. ಈ ಸತ್ಕಾರ್ಯದಲ್ಲಿ ಸರ್ವರೂ ಪಾಲ್ಗೊಂಡು ಸಹಕಾರಿಯಾಗಬೇಕಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಪೂರ್ವ ನಡೆದ ಬ್ರಹತ್ ಶೋಭಾ ಯಾತ್ರೆಗೆ ಸಹಸ್ರಾರು ಜನರು ಹಾಜರಿದ್ದರು. ವೇದಿಕೆಯಲ್ಲಿ ವಿವಿದ ಸಮಾಜದ ಪ್ರಮುಖರು ಹಾಗೂ ಜನ ಪ್ರತಿನಿಧಿಗಳಾದ ದಿನಕರ ಶೆಟ್ಟಿ, ನಾಗರಾಜ ನಾಯಕ ತೊರ್ಕೆ, ಪ್ರದೀಪ ನಾಯಕ, ಸೂರಜ ನಾಯ್ಕ ಸೋನಿ, ವೆಂಕಟ್ರಮಣ ಹೆಗಡೆ, ಪ್ರಮೋದ ಹೆಗಡೆ ಹಾಗೂ ಇನ್ನಿತರರು ಹಾಜರಿದ್ದರು.