ಕಾರವಾರ: ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕ್ರಮ ಸ್ವಾಗತಾರ್ಹ ಎಂದು ಶಾಸಕ ಸತೀಶ್ ಸೈಲ್ ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೃಹತ್ ಎಲ್‍ಇಡಿ ಪರದೆ ಮೂಲಕ ಸರ್ಕಾರಿ ಯೋಜನೆಗಳ ಪ್ರಚಾರಕ್ಕಾಗಿ ಹಮ್ಮಿಕೊಂಡಿರುವ ‘ಪ್ರಗತಿ ಮಾಹಿತಿ’ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರ ಹಿತಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಯೋಜನೆಗಳ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ವಿಶೇಷವೆಂದರೇ ಹಗಲು ಹೊತ್ತಿನಲ್ಲೂ, ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ಹೊಂದಿರುವ ವಿಡಿಯೋ ಅನ್ನು ಸಾರ್ವಜನಿಕರು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಈ ವಿಶೇಷ ಪ್ರಚಾರಾಂದೋಲನ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಹಿಮಂತರಾಜು ಮಾತನಾಡಿ, ಡಿ.3ರಿಂದ ಡಿ.5 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಆಯ್ದ 45 ಗ್ರಾಮಗಳಲ್ಲಿ ಪ್ರಗತಿ ಮಾಹಿತಿ ವಿಶೇಷ ಪ್ರಚಾರಾಂದೋಲನ ನಡೆಯಲಿದ್ದು, ದಿನವೊಂದಕ್ಕೆ 5 ಗ್ರಾಮಗಳಲ್ಲಿ ವಿಶೇಷ ವಾಹನ ಸಂಚರಿಸಿ, ಕಾರ್ಯಕ್ರಮ ಬಿತ್ತರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉಪವಿಭಾಗಾಧಿಕಾರಿಗಳಾದ ರಮೇಶ ಕಳಸದ, ಶಿವಾನಂದ ಕರಾಳೆ, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಯೋಗೇಶ್ವರ, ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ ಹಾಜರಿದ್ದರು.