ಕಾರವಾರ: ಯಲ್ಲಾಪುರ ಪಟ್ಟಣ ಪಂಚಾಯ್ತಿಯಿಂದ ಕೈಬಿಟ್ಟಿರುವ ಸಹಸ್ರಳ್ಳಿ, ಕೊಂಡೆಮನೆ ವಾರ್ಡ್ ಗಳನ್ನು ಗ್ರಾಮ ಪಂಚಾಯತಿಗೆ ಸೇರಿಸಲು ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿರುವುದರಿಂದ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗೆ ಮನವಿ ನೀಡಿದರು.
ಈ ಹಿಂದೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಸಹಸ್ರಳ್ಳಿ, ಕೊಂಡೆಮನೆ ವಾರ್ಡ್ ಗಳನ್ನು ಯಾವುದೇ ಗ್ರಾಮ ಪಂಚಾಯತಿಗೆ ಸೇರಿಸದೇ, ಪ್ರತ್ಯೇಕ ಪಂಚಾಯತಿಯನ್ನು ಮಾಡದೇ ಇರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನವೆಂಬರ್ 27 ರಂದು ತಹಶಿಲ್ದಾರರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಆ ಮೂಲಕ ಮುಖ್ಯಮಂತ್ರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಆದ್ದರಿಂದ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈಗಲೂ ಇದು ಇತ್ಯರ್ಥ ಆಗದಿದ್ದಲ್ಲಿ ಸಿಎಂ ಎದುರು ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ತಿಳಿಸಿದರು.
ಯಲ್ಲಾಪುರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಭಟ್, ತಿಮ್ಮಣ್ಣ ಭಟ್, ನರಸಿಂಹ ಭಟ್ ಉಪಸ್ಥಿತರಿದ್ದರು.