ಇಂದು ಕ್ರೈಸ್ತರಿಗೆ ಪೇಸ್ತ ಹಬ್ಬದ ಸಂಭ್ರಮ. ಹಿಂದೂಗಳ ರಥೋತ್ಸವ ಮತ್ತು ವೈಭವದ ಜಾತ್ರೆಯಷ್ಟೇ ಮಹತ್ವ ಪಡೆದಿದೆ ಈ ‘ಪೇಸ್ತ’. ಈ ಹಬ್ಬದ ಸಡಗರಕ್ಕೆ ಸಜ್ಜಾಗಿ ನಿಂತಿದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೂರೂವರೆ ಶತಮಾನದಷ್ಟು ಹಳೆಯ ಸಂತ ಝೇವಿಯರ್‌ ಚರ್ಚ್.

ಬಲಿ ಪೂಜೆ ಈ ಹಬ್ಬದ ವಿಶೇಷ. ಚರ್ಚ್ ಎದುರಿನ ವಿಶಾಲ ಬಯಲಿನಲ್ಲಿ ಬಲಿ ಪೂಜೆ, ಸಾಮೂಹಿಕ ಪ್ರಾರ್ಥನೆ ,ತಪ್ಪು ಒಪ್ಪುಗಳ ಸಮರ್ಪಣೆ, ಕ್ಷಮಾಪಣಾ ವಿಧಿಗಳು ನಡೆಯುತ್ತವೆ. ಬೇರೆ ಬೇರೆ ಪ್ರಾಂತ್ಯದ ಚರ್ಚ್ ಬಿಷಪ್ ಅವರನ್ನು ಕರೆಸಿ ಆಶೀರ್ವಚನ ಪಡೆಯುವುದು ಸಂಪ್ರದಾಯ. ಈ ಬಾರಿ ಬೆಳಗಾವಿಯ ಬಿಷಪ್ ಬರಲಿದ್ದಾರೆ. ಸಂತ ಫ್ರಾನ್ಸಿಸ್ ಝೇವಿಯರ್‌ನ ಪ್ರತಿಮೆಯ ದರ್ಶನ ಪಡೆಯಲು ಕ್ರೈಸ್ತರು ಮಾತ್ರ­ವಲ್ಲದೇ ಹಿಂದೂ, ಮುಸ್ಲಿಂ ಸಮುದಾಯದವರೂ ಬರುವ ಕಾರಣ ಇದೊಂದು ಸರ್ವ ಧರ್ಮಗಳ ಸಮ್ಮೇಳನದಂತೆ ಭಾಸವಾಗುತ್ತದೆ. ಇಲ್ಲಿ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುವುದು ಎಂಬ ನಂಬಿಕೆಯಿಂದ ಎಲ್ಲ ಧರ್ಮೀಯರೂ ಬರುತ್ತಾರೆ.

ಪೋರ್ಚುಗೀಸರ ಕಾಲದಲ್ಲಿ ಈ ಚರ್ಚ್‌ ನಿರ್ಮಾಣ­ವಾಗಿದೆ. ಹಿಂದಿನ ಕಾಲದಲ್ಲಿ ಚಂದಾವರವು ಹೊನ್ನಾವರ ತಾಲ್ಲೂಕಿನ ಅತಿ ಸಣ್ಣ ಗ್ರಾಮವಾಗಿತ್ತು. ವಿಜಾಪುರದ ಆದಿಲ್ ಷಾಗಳ ವಂಶಸ್ಥನಾದ ಸರ್ಪ ಮಲ್ಲಿಕ ಎಂಬುವನು ಕುಮಟಾ ಸಮೀಪದ ಮಿರ್ಜಾನ್ ಎಂಬಲ್ಲಿ ಕೋಟೆ ನಿರ್ಮಿಸಿ ಕರಾವಳಿ ಪ್ರದೇಶವನ್ನು ಆಳುತ್ತಿದ್ದನು. ೧೭ನೇ ಶತಮಾನದ ಆರಂಭದಲ್ಲಿ ಈತ ಚಂದಾವರ ನಗರ ನಿರ್ಮಾಣ ಮಾಡಿ ಆಡಳಿತದ ಉಪಕೇಂದ್ರ ಸ್ಥಾಪಿಸಿದ್ದ. ನಂತರ ಕೆಳದಿ ಅರಸರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತು. ಕೆಳದಿಯ ರಾಜಮನೆತನದ ಅರಸ ಬಸಪ್ಪ ನಾಯಕ ಕ್ರಿ.ಶ.೧೬೭೮ರಲ್ಲಿ ಕ್ಯಾಥೊಲಿಕ್ ಪಂಗಡಕ್ಕೆ ಸೇರಿದ ಇಲ್ಲಿನ ಜನರಿಗೆ ಅನುಕೂಲ­ಕ್ಕೆ ಈ ಚರ್ಚ್ ನಿರ್ಮಿಸಿಕೊಟ್ಟನು ಎನ್ನುತ್ತದೆ ದಾಖಲೆ.

RELATED ARTICLES  ಶಿಕಾರಿಪುರದಲ್ಲಿ ತೀವ್ರ ಸಂಚಲನ ಮೂಡಿಸಿದ ನರಬಲಿ ಪ್ರಕರಣ.!

೧೮ನೇ ಶತಮಾನದ ಆರಂಭದಲ್ಲಿ ಟಿಪ್ಪುಸುಲ್ತಾನನ ಸೈನ್ಯದ ದಂಡಯಾತ್ರೆಯ ಸಂದರ್ಭದಲ್ಲಿ ಈ ಚರ್ಚ್ ಕಟ್ಟಡ ಹಾನಿಗೊಳಗಾಯಿತು. ಕ್ರಿ.ಶ.೧೮೭೪ರಲ್ಲಿ ಈ ಚರ್ಚನ್ನು ಇನ್ನಷ್ಟು ದುರಸ್ತಿಗೊಳಿಸಿ ವ್ಯವಸ್ಥಿತವಾಗಿ ಕಟ್ಟಲಾಯಿತು. ಸುಮಾರು ೨೦೦ ಜನರು ಕುಳಿತುಕೊಳ್ಳಬಹುದಾದಷ್ಟು ವಿಶಾಲ ಸಭಾಂಗಣ, ಪವಿತ್ರ ಏಸುವಿನ ದೊಡ್ಡ ಶಿಲುಬೆ, ಮೇರಿ ಮಾತೆಯ ವಿಗ್ರಹ, ಏಸುವಿನ ಜೀವನ ಸಂದೇಶ ಸಾರುವ ವಿವಿಧ ಚಿತ್ರಗಳನ್ನು ಒಳಗೊಂಡು ಸುಂದರ ಒಳಾಂಗಣ ನಿರ್ಮಿಸಲಾಗಿತ್ತು. ಕಾಷ್ಠ ಶಿಲ್ಪದಿಂದ ಕೂಡಿದ ಈ ಚರ್ಚ್‌ ಬಹು ಆಕರ್ಷಕವಾಗಿದೆ.

RELATED ARTICLES  ಕ್ರೀಡೆ ಸಂಕುಚಿತ ಭಾವನೆಯನ್ನು ಹೊಡೆದು ಹಾಕಿ ವಿಶಾಲ ಮನೋಭಾವವನ್ನು ಬೆಳೆಸುತ್ತದೆ : ಪ್ರೋ.ಎಂ. ಜಿ ಭಟ್ಟ

ಈ ಹಳೆಯ ಚರ್ಚಿನಲ್ಲಿ ಹಿಂದೆ ಗೋವಾದಲ್ಲಿ ಜನಪ್ರಿಯತೆ ಗಳಿಸಿದ್ದ ಮತ್ತು ಪವಾಡದ ಬದುಕು ಸಾಗಿಸಿದ್ದ ಕ್ರೈಸ್ತ ಧರ್ಮದ ಸಂತ ಫ್ರಾನ್ಸಿಸ್ ಝೇವಿಯರ್‌ನ ಎಲುಬೊಂದನ್ನು ಪೆಟ್ಟಿಗೆಯಲ್ಲಿ ಭದ್ರವಾಗಿರಿಸಲಾಗಿದೆ. ಸುಮಾರು ೫೦೦ ವರ್ಷಗಳ ಹಿಂದೆ ಸ್ಪೇನ್‌ನಿಂದ ಆಗಮಿಸಿದ ಸಂತ ಫ್ರಾನ್ಸಿಸ್ ಝೇವಿಯರ್ ಗೋವಾದಲ್ಲಿ ಬಹುಕಾಲ ನೆಲೆಸಿ ದೈವೀ ಸದೃಶ ಬದುಕು ನಡೆಸಿದ್ದರು. ಪ್ರತಿ ವರ್ಷ ಪೇಸ್ತಿನ ಹಬ್ಬಕ್ಕಿಂತ ೯ ದಿನ ಮೊದಲು ಪೆಟ್ಟಿಗೆಯೊಳಗಿನಿಂದ ಈ ಎಲುಬನ್ನು ಹೊರ ತೆಗೆದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಪೇಸ್ತಿನ ಗಬ್ಬದ ಮರುದಿನ ಪುನಃ ಅದನ್ನು ಶುದ್ಧಗೊಳಿಸಿ ಪೆಟ್ಟಿಗೆಯೊಳಗೆ ಭದ್ರಪಡಿಸಿ ಇಡಲಾಗುತ್ತದೆ.

ಚಂದಾವರ ಹೊನ್ನಾವರ ತಾಲ್ಲೂಕು ಕೇಂದ್ರದಿಂದ ೧೭ ಕಿ.ಮೀ ದೂರವಿದೆ. ಕುಮಟಾ ತಾಲ್ಲೂಕು ಕೇಂದ್ರದಿಂದ ಸುಮಾರು ೯ ಕಿ.ಮೀ ದೂರದಲ್ಲಿದೆ.

ಹೊನ್ನಾವರದಿಂದ ಅರೇ ಅಂಗಡಿ, ನೇಲಕೋಡು, ಹೆಬ್ಬಾರಕೆರೆ ಮೂಲಕ ಚಂದಾವರ ತಲುಪಬಹುದು. ಈ ಮಾರ್ಗವಾಗಿ ರಾಜ್ಯ ಸಾರಿಗೆ ಸಂಸ್ಥೆಯಿಂದ ನಿತ್ಯವೂ ಹಲವು ಬಸ್ ಸಂಚಾರ ಇದೆ. ಈ ಚರ್ಚ್‌ ಹೆದ್ದಾರಿ ಪಕ್ಕದಲ್ಲೇ ಇದೆ.