ಕಾರವಾರ: ಡಿ. 8ರಿಂದ ಆರಂಭವಾಗಲಿರುವ ಕರಾವಳಿ ಉತ್ಸವದಲ್ಲಿ ಮೊದಲ ಬಾರಿಗೆ ಪೆಂಟ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಡಿ.ಡಿ.ಪಿ.ಐ ಪಿ.ಕೆ.ಪ್ರಕಾಶ ಹೇಳಿದ್ದಾರೆ.
ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಡಿ.8 ರಿಂದ 10ರ ವರೆಗೆ ನಡೆಯಲಿರುವ ಕರಾವಳಿ ಉತ್ಸವದಲ್ಲಿ ಪ್ರಥಮ ಬಾರಿಗೆ ಪೆಂಟ್ ಬಾಲ್ ಕ್ರೀಡಾ ಸ್ಪರ್ಧೆಯನ್ನು ಪರಿಚಯಿಸುತ್ತಿದ್ದು, ಬೀಚ್ ವಾಲಿಬಾಲ್, ಹಗ್ಗ ಜಗ್ಗಾಟ, ಮ್ಯಾರಾಥಾನ್ ಕ್ರೀಡಾ ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗಿದೆ ಎಂದು ಕರಾವಳಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆ ಡಿ.ಡಿ.ಪಿ.ಐ ಪಿ.ಕೆ.ಪ್ರಕಾಶ ತಿಳಿಸಿದರು.
ಡಿ.ಡಿ.ಪಿ.ಐ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ 8, 9 ಮತ್ತು 10 ರಂದು ಕಾರವಾರ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯುವ ಪೆಂಟ್ ಬಾಲ್ ಕ್ರೀಡೆಯಲ್ಲಿ 7-7 ಜನರ ತಂಡ ರಚಿಸಿ ಸ್ಪರ್ಧೆ ನಡೆಸಲಾಗುವದು. 20 ನಿಮಿಷಗಳ ಕಾಲ ನಡೆಯುವ ರೋಮಾಂಚಕಾರಿ ಸ್ಪರ್ಧೆಯಲ್ಲಿ ಯಾವುದೇ ಅಪಾಯಗಳು ಇರುವುದಿಲ್ಲ. ಸದೃಡ ದೇಹ ಹೊಂದಿದ ವಯಸ್ಕರರು ಪೆಂಟ್ ಬಾಲ್ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ. ಗೋವಾದ ಮಿಲ್ಸಮ್ ಸಂಸ್ಥೆಯ ಸಹಕಾರದೊಂದಿಗೆ ಕ್ರೀಡೆಯನ್ನು ಆಯೋಜಿಸಲಾಗಿದೆ ಎಂದರು. ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ 150 ರೂ. ನಿಗದಿ ಪಡಿಸಲಾಗಿದೆ ಎಂದರು.
ಪ್ರಥಮ ದಿನದ ಕ್ರೀಡಾಕೂಟವನ್ನು ದಕ್ಷಿಣ ವಲಯ ಐ.ಜಿ.ಪಿ ಹೇಮಂತ ನಿಂಬಾಳಕರ್ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.