ಓಕೀ ಚಂಡಮಾರುತದ ಪರಿಣಾಮದಿಂದಾಗಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿ ನೀರು ತಡೆಗೋಡೆಗಳನ್ನು ದಾಟಿ ಮನೆಗಳಿಗೆ ನುಗ್ಗಿರುವ ಘಟನೆ ಕರ್ಕಿಯ ತೊಪ್ಪಲಕೆರಿಯಲ್ಲಿ ನಡೆದಿದೆ. ರಾತ್ರಿ ವೇಳೆಯಲ್ಲಿ ಸಮುದ್ರದ ಅಲೆಗಳು ತಡೆಗೋಡೆ ದಾಟಿ ಸುಮಾರು 200ಮೀಟರಿನಷ್ಟು ಮುಂದೆ ಬಂದಿದೆ. ಇದರಿಂದ ಕೆಲವರು ಮನೆ ಖಾಲಿ ಮಾಡಿದ್ದಾರೆ.
ಇಂದು ಕೂಡ ನೀರಿನ ಮಟ್ಟ ಹೆಚ್ಚಳವಾಗಲಿದ್ದು ದಡದಲ್ಲಿ ವಾಸಿಸುವ ಜನರು ಜಾಗೃತರಾಗಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.ಈ ಬಗ್ಗೆ ಹಲವು ಕಡೆಗಳಲ್ಲಿ ರಿಕ್ಷಾದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ತಡೆಗೋಡೆಗಳನ್ನೂ ಮೀರಿ ಬರುತ್ತಿರುವ ಸಮುದ್ರದ ಆರ್ಭಟಕ್ಕೆ ಜನಜೀವನ ಅಸ್ಥವ್ಯಸ್ಥವಾಗಿದೆ.
ಯಾವ ಸಮಯದಲ್ಲಿ ಏನಾಗುತ್ತದೋ ಎಂಬುದೇ ಜನತೆಗೆ ಕಾಡುತ್ತಿರುವ ಪ್ರಶ್ನೆಯಾಗಿದೆ. ಸಣ್ನದಾಗಿ ಪ್ರಾರಂಭವಾಗಿದ್ದ ಮಳೆ ಈಗ ಬಿರುಸಾಗಿ ಬೀಳಲಾರಂಭಿಸಿದ್ದು ಜನತೆಗೆ ಮತ್ತಷ್ಟು ತಲೆನೋವು ತಂದಿದೆ. ಹೆಚ್ಚಿನ ಮಳೆಯ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ತಿಳಿಸಿದ್ದು ಜನತೆಯನ್ನು ಕಂಗಾಲಾಗಿಸಿದೆ.