ಸಿದ್ದಾಪುರ: ಪೊಲೀಸ್ ಇಲಾಖೆಯ ವೈಫಲ್ಯದಿಂದ ತಾಲೂಕಿನಾದ್ಯಂತ ಇಸ್ಪೀಟ್,ಓಸಿ, ಕಳ್ಳತನ,ಗಾಂಜಾ ಮಾರಾಟ, ಅನೈತಿಕ ಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿದ್ದಾಗ ಇಂತಹ ಚಟುವಟಿಕೆಗಳು ತಹಬಂದಿಗೆ ಬಂದಿದ್ದವು ಮತ್ತು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇಂದು ಪಟ್ಟಣದ ಪೊಲೀಸ್ ಇಲಾಖೆ ಕಚೇರಿಯ ಅನತಿ ದೂರದಲ್ಲಿರುವ ಅಂಗಡಿಗಳು ಕಳುವಾಗುತ್ತಿದೆ. ಬ್ಯಾಂಕು-ಸಂಘ ಸಂಸ್ಥೆಗಳಿಂದ ಸಾಲ ಮಾಡಿ ಅಂಗಡಿ ನಡೆಸುವವರ ಸ್ಥಿತಿ ಚಿಂತಾಜನಕವಾಗಿದೆ. ಅಂಗಡಿ ಕಳ್ಳತನವಾಗುತ್ತಿರುವುದಲ್ಲದೇ ವಾಹನಗಳು ಕಳ್ಳತನವಾಗುತ್ತಿದ್ದರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಾಂಜಾ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿಕೊಳ್ಳುತ್ತಿರುವ ಕುರಿತು ಮತ್ತು ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಸಾರ್ವಜನಿಕರು ಹಿಡಿದುಕೊಟ್ಟರೂ ಪೊಲೀಸ್ ಇಲಾಖೆ ಅವರ ಮೇಲೆ ಯಾವೂದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಸಿದ್ದಾಪುರದಲ್ಲಿ ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಎನ್ನುವ ಅನುಮಾನ ಜನಸಾಮಾನ್ಯರದ್ದಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೈತಿಕತೆ ಇದ್ದರೆ ಕಳ್ಳರನ್ನು ಹಿಡಿದು ಕ್ರಮಕೈಗೊಳ್ಳಬೇಕು.
ಸಿದ್ದಾಪುರದ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಉಡುಪಿ, ಚಿಕ್ಕಮಂಗಳೂರು, ಮಂಗಳೂರು ಮತ್ತಿತರ ಕಡೆಗೆ ಬಂದೋಬಸ್ತಿಗಾಗಿ ನಿಯೋಜನೆ ಮಾಡುತ್ತಿರುವುದು ಸಹ ಈ ರೀತಿಯ ಚಟುವಟಿಕೆ ನಡೆಯುವುದಕ್ಕೆ ಹೆಚ್ಚು ಕಾರಣವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿದ್ದಾಪುರ ಠಾಣೆಗೆ ಸಿಬ್ಬಂದಿಗಳನ್ನು ನೇಮಕ ಮಾಡುವುದಕ್ಕೆ ಮುಂದಾಗಬೇಕು ಮತ್ತು ಇಲ್ಲಿಯ ಅಧಿಕಾರಿಗಳನ್ನು ಬೇರೆ ಬೇರೆ ಕಡೆ ಬಂದೋಬಸ್ತಿಗೆ ನಿಯೋಜನೆ ಮಾಡಬಾರದು. ರಾತ್ರಿ ಪಾಳಯದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸುವುದಕ್ಕೆ ಮುಂದಾಗಬೇಕು. ಈಗಾಗಲೇ ತಾಲೂಕಿನಾದ್ಯಂತ ಅಡಕೆ, ಭತ್ತ ಮತ್ತಿತರ ಬೆಳೆಗಳ ಕಟಾವೂ ನಡೆಯುತ್ತಿದ್ದು ಗ್ರಾಮೀಣ ಪ್ರದೇಶದ ಕಡೆಗೂ ಹೆಚ್ಚಿನ ರಕ್ಷಣೆ ನೀಡುವುದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಚಂದಾವರದಲ್ಲಿ ನಡೆದ ಘಟನೆಯಲ್ಲಿಯೂ ಪೊಲೀಸ್ ವೈಫಲ್ಯವೇ ಎದ್ದು ಕಾಣುತ್ತಿದೆ. ಇಲಾಖೆ ಮುಂಜಾಗ್ರತೆಯಾಗಿ ಯಾಕೆ ಕ್ರಮ ಕೈಗೊಂಡಿಲ್ಲ.ಸೂರಜ್ ನಾಯ್ಕ ಅವರ ಕಾರಿನ ಮೇಲೆ ಕಲ್ಲು ಎಸೆದವರನ್ನು ಯಾಕೆ ಬಂದಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರಂಭಗೊಂಡು ಎಲ್ಲರೂ ದುರಾಢಳಿತದಲ್ಲಿ ತೊಡಗಿಕೊಂಡಿದ್ದಾರೆ ಎಂದು ಕಿಡಿಕಾರಿ ಹೀಗೆ ಮುಂದುವರೆದರೆ ಮುಂದಿನ ದಿನದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ.ಪಂ. ಅಧ್ಯಕ್ಷೆ ಸುಮನಾ ಕಾಮತ್, ಉಪಾಧ್ಯಕ್ಷೆ ದೇವಮ್ಮ ಚಲುವಾದಿ, ಗುರುರಾಜ ಶಾನಭಾಗ,ಸುರೇಶ ನಾಯ್ಕ, ಕೃಷ್ಣಮೂರ್ತಿ ಮಡಿವಾಳ, ವಿನಯ ಹೊನ್ನೆಗುಂಡಿ, ಶಶಿ ಗೌಡರ್, ಸುರೇಶ ನಾಯ್ಕ, ವಿಜಯನಾರಾಯಣ ಹೆಗಡೆ ಇತರರಿದ್ದರು.