ಕಾರವಾರ: ಓಖ್ಹಿ ಚಂಡಮಾರುತ ಹಾಗೂ ಸೂಪರ್ ಮೂನ್ ಪ್ರಭಾವದಿಂದ ಜಿಲ್ಲೆಯ ವಿವಿಧೆಡೆ ಅವಘಡಗಳು ಸಂಭವಿಸಿವೆ. ಜನರ ಬದುಕು ಬೀದಿಗೆ ಬಿದ್ದಿದೆ.

ಹೊನ್ನಾವರ ತಾಲೂಕಿನ ತೊಪ್ಪಲಕೇರಿ, ಹೆಗಡೆ ಹಿತ್ಲ ಇತರೆಡೆ ಮನೆಗಳಿಗೆ ನೀರು ನುಗ್ಗಿದೆ. ತೊಪ್ಪಲಕೇರಿಯ ಶಂಕರ ನಾಯ್ಕ ಅವರ ಕುಟುಂಬ ಇಡೀ ರಾತ್ರಿ ಮನೆಯಿಂದ ಹೊರಬಂದು ಆತಂಕದಲ್ಲಿ ಕಾಲ ಕಳೆದಿದೆ.

ಮಂಜಗುಣಿಯಲ್ಲಿ ಸಮುದ್ರ ಅಬ್ಬರ ಹೆಚ್ಚಿ ಅಲೆ ತಡೆಗೋಡೆ ಕುಸಿದು ಬಿದ್ದಿದೆ. ವಿದ್ಯುತ್ ಕಂಬಗಳು ವಾಲಿ ನಿಂತಿವೆ. ಕಾರವಾರದ ಮಾಜಾಳಿಯಲ್ಲೂ ನೀರು ಉಕ್ಕಿ ಬಂದಿದ್ದು, ಮೀನುಗಾರರು ದೋಣಿ ನಿಲ್ಲಿಸಲು ಜಾಗವಿಲ್ಲದೇ ತೊಂದರೆ ಪಡಬೇಕಾಯಿತು.

ಮೀನುಗಾರಿಕೆ ಬಂದ್

ಸತತ ಮೂರನೇ ದಿನವೂ ಜಿಲ್ಲೆಯಲ್ಲಿ ಮೀನುಗಾರಿಕೆ ಬಂದಾಗಿದೆ. ಓಖ್ಹಿ ಅಬ್ಬರ ತಣ್ಣಗಾಗದ ಕಾರಣ ಇನ್ನೂ ಒಂದು ದಿನ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ. ಕಾರವಾರ, ಹೊನ್ನಾವರ ಭಟ್ಕಳ ಬಂದರುಗಳ ಸಮೀಪ ಹೊರ ರಾಜ್ಯಗಳ ನೂರಾರು ದೋಣಿಗಳು ಲಂಗರು ಹಾಕಿ ರಕ್ಷಣೆ ಪಡೆದುಕೊಂಡಿವೆ.

ಗೋವಾದ ಪಣಜಿಗೂ ವಕ್ಕರಿಸಿದ ಓಖ್ಹಿ

ಗೋವಾದಲ್ಲಿ ಸಮುದ್ರದ ನೀರು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ಬೀಚ್​ಗಳಲ್ಲಿ ಇದ್ದ ಬಾರ್ ಮತ್ತು ರೆಸ್ಟೋರೆಂಟ್​ಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ. ಪೆಡ್ನೆ ತಾಲೂಕಿನ ಮೊರಜಿ, ಮಾಣದ್ರೆ, ಹರಮಲ್, ಕೇರಿ ಬೀಚ್​ಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಯುಂಟಾಗಿದೆ.

RELATED ARTICLES  NEET ಪರೀಕ್ಷೆಯಲ್ಲಿ ಹೊನ್ನಾವರದ ಆದರ್ಶ ಎಸ್ ನಾಯ್ಕ ಸಾಧನೆ