ಬಹುತೇಕ ಗರ್ಭಿಣಿಯರು ತಮ್ಮ ಪ್ರಥಮ ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯಿಂದ ಬಳಲುತ್ತಾರೆ. ಅತಿಯಾದ ತೊಂದರೆಗೆ ಒಳಪಡಿಸದೆ, ಚಿಕಿತ್ಸೆಯ ಆವಶ್ಯಕತೆ ಇಲ್ಲದೆ ಕ್ರಮೇಣ ಕಡಿಮೆಯಾಗುವ ಈ ಲಕ್ಷಣವು ಕೆಲವರಲ್ಲಿ ಮಾತ್ರ ಹೆಚ್ಚಾದ ವಾಂತಿಯ ವೇಗದಿಂದಾಗಿ ವಿಶೇಷ ಚಿಕಿತ್ಸೆ ಪಡೆಯುವಂತೆ ಮಾಡುತ್ತದೆ. ಅತಿಯಾದ ವಾಂತಿಯಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ದೈಹಿಕವಾಗಿ ಬಳಲಬೇಕಾಗುತ್ತದೆ.
ಇದು ಯಾಕಾಗಿ?: ಗರ್ಭಾವಸ್ಥೆಯ ಮೊದಲ ಕೆಲವು ತಿಂಗಳುಗಳಲ್ಲಿ ವಾಕರಿಕೆಯ ಮನೋಭಾವ, ಸುಸ್ತು, ಹೊಟ್ಟೆನೋವು, ಆಹಾರಸೇವನೆಯ ಮೇಲೆ ನಿರಾಸಕ್ತಿ, ರುಚಿ ಇಲ್ಲದಿರುವುದು ಹಾಗೂ ವಾಂತಿಯಿಂದ ಗರ್ಭಿಣಿ ಬಳಲುತ್ತಾಳೆ. ಗರ್ಭಾವಸ್ಥೆಯಲ್ಲಿನ ಸಹಜ ಕ್ರಿಯೆಯಾದ ಇದಕ್ಕೆ ಮಾರ್ನಿಂಗ್ ಸಿಕ್ನೆಸ್ ಎನ್ನಲಾಗುವುದು. ಬೆಳಗ್ಗೆ ಮಾತ್ರವಲ್ಲದೆ ದಿನದ ಯಾವುದೇ ಸಮಯದಲ್ಲೂ ಬರಬಹುದಾದ ಈ ಲಕ್ಷಣಗಳು ಹೆಚ್ಚಿನವರಲ್ಲಿ ಒಂದರಿಂದ ನಾಲ್ಕು ಗಂಟೆಗಳ ಕಾಲ ಇದ್ದು ನಂತರ ಬೇಗ ಮರೆಯಾಗುತ್ತದೆ.
ಆದರೆ ಕೆಲವರಲ್ಲಿ ಸತತ, ದೀರ್ಘಕಾಲಿಕ ಹಾಗೂ ಅತಿಯಾದ ವಾಂತಿಯಿಂದಾಗಿ ದೇಹವು ಸುಸ್ತಾಗುತ್ತದೆ. ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಗರ್ಭಾವಸ್ಥೆಯ ಒಂಭತ್ತು ವಾರಗಳ ಮೊದಲು ವಾಂತಿಯೊಂದಿಗೆ ಸುಸ್ತು ವ್ಯಕ್ತವಾಗುತ್ತದೆ. ಹತ್ತರಲ್ಲಿ ಒಂಭತ್ತು ಸ್ತ್ರೀಯರಲ್ಲಿ ಈ ಎಲ್ಲ ಲಕ್ಷಣಗಳು 16 ವಾರದೊಳಗೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಆದರೆ ಕೆಲವು ಸ್ತ್ರೀಯರಲ್ಲಿ ಮಾತ್ರ ಗರ್ಭಾವಸ್ಥೆಯ ಪರ್ಯಂತ ಈ ಲಕ್ಷಣಗಳು ಮುಂದುವರೆಯುತ್ತವೆ. ಅತಿ ವಾಂತಿ, ಸುಸ್ತು ಸ್ತ್ರೀಯನ್ನು ದೈಹಿಕವಾಗಿ ದುರ್ಬಲಗೊಳಿಸಿ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಮತ್ತು ನಿತ್ಯ ದೈನಂದಿನ ಚಟುವಟಿಕೆಗಳಿಗೆ ತೊಡಕು ಉಂಟು ಮಾಡುತ್ತದೆ.
ಅತಿಯಾದ ವಾಂತಿಯ ಪರಿಣಾಮ: ನೂರರಲ್ಲಿ ಒಬ್ಬ ಗರ್ಭಿಣಿಯಲ್ಲಿ ಅತಿಯಾದ ಸುಸ್ತು, ವಾಂತಿ (ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ) ಬಹಳ ದಿನಗಳ ಕಾಲ ಇರುವುದರಿಂದ ದೇಹದಲ್ಲಿನ ನೀರಿನಾಂಶದ ಕೊರತೆ ಉಂಟಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಜೀವಸತ್ವಗಳ ಕೊರತೆಯೂ ಉಂಟಾಗಬಹುದು. ಸರಿಯಾಗಿ ಆಹಾರ ಸೇವಿಸದ ಪರಿಣಾಮ ದೇಹವು ಶೇಖರಿತ ಕೊಬ್ಬಿನಾಂಶವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ದೇಹವು ಕೀಟೋನ್ ಅಂಶವನ್ನು ಮೂತ್ರದಲ್ಲಿ ಕಳೆದುಕೊಳ್ಳುತ್ತದೆ. ಅತಿಯಾದ ವಾಂತಿಯಿಂದಾಗಿ ಗರ್ಭಿಣಿಯಲ್ಲಿ ಆಗುವ ಈ ಅಪಾಯಕಾರಿ ಅವಸ್ಥೆಯನ್ನು ಹೈಪರ್ ಎಮಿಸಿಸ್ ಗ್ರಾವಿಡೋರಮ್ ಎನ್ನಲಾಗುತ್ತದೆ. ಮೂತ್ರಮಾರ್ಗದ ಸೋಂಕು, ಅಧಿಕ ಥೈರಾಯ್್ಡ ಪ್ರಮಾಣ ಹಾಗೂ ಸ್ಥೂಲಕಾಯದ ಗರ್ಭಿಣಿಯರು ಈ ಅವಸ್ಥೆಗೆ ತುತ್ತಾಗಬಹುದು. ಸಮತೋಲನ ಆಹಾರದ ಜೊತೆಗೆ ಅಧಿಕ ನೀರಿನಾಂಶದಿಂದ ಕೂಡಿದ ಆಹಾರವನ್ನು ಸೇವಿಸಬೇಕು. ಅಲ್ಲದೆ ತ್ವರಿತವಾಗಿ ಜೀವಸತ್ವಗಳ ಪೂರೈಕೆಯ ಅಗತ್ಯವಿದ್ದು, ಇಂಥ ಅವಸ್ಥೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು ಒಳಿತು.
ಕಾರಣಗಳು
ನಿರ್ದಿಷ್ಟ ಕಾರಣ ಇಲ್ಲವಾದರೂ ಗರ್ಭಿಣಿಯಲ್ಲಿ ಆಗುವ ಹಲವು ಹಾಮೋನ್ಗಳ ಬದಲಾವಣೆಯಿಂದಾಗಿ ಆಗಬಹುದು. ಕೆಲವೊಂದು ಅವಸ್ಥೆಯಲ್ಲಿ ಹಲವಾರು ಕಾರಣಗಳಿಂದಾಗಿ ವಾಂತಿಯ ವೇಗ ಹೆಚ್ಚಾಗಬಹುದು. ಚೊಚ್ಚಲ ಗರ್ಭದಲ್ಲಿ, ಅವಳಿ ಗರ್ಭವಾಗಿದ್ದಲ್ಲಿ, ಸ್ತ್ರೀಯು ಮೈಗ್ರೇನ್ ರೋಗದಿಂದ ಬಳಲುತ್ತಿದ್ದಲ್ಲಿ, ಗರ್ಭಾವಸ್ಥೆಯಲ್ಲಿನ ವಾಂತಿ ಹೆಚ್ಚಾಗುತ್ತದೆ. ಅಲ್ಲದೆ ಅತಿಯಾದ ಮಾನಸಿಕ ಒತ್ತಡ, ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸಿದ ಮಹಿಳೆಯರಲ್ಲಿ ವಾಂತಿಯೂ ಹೆಚ್ಚಾಗಿ ಕಾಡುತ್ತದೆ.
ಮಗುವಿನ ಮೇಲೆ ದುಷ್ಪರಿಣಾಮ ಆಗಬಹುದೆ?
ಮಗುವಿನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಮಗುವಿನ ಪೋಷಕಾಂಶವು ತಾಯಿಯ ಶೇಖರಿತ ಪೋಷಕಾಂಶಗಳಿಂದ ಲಭ್ಯವಾಗುವುದರಿಂದ ವಾಂತಿ ಮಾಡುವ ಪ್ರಕ್ರಿಯೆ ಅಥವಾ ಕಷ್ಟಪಟ್ಟು ಆಗುವ ವಾಂತಿಯ ಪ್ರವೃತ್ತಿಯಿಂದ ಗರ್ಭಕ್ಕೆ ಯಾವುದೇ ಪರಿಣಾಮವಾಗದು. ಹಲವು ಅಧ್ಯಯನಗಳ ಪ್ರಕಾರ ಪ್ರಥಮ ಅವಧಿಯಲ್ಲಾಗುವ ವಾಂತಿಯು ಆರೋಗ್ಯಕರ ಗರ್ಭದ ಸೂಚಕ ಎಂದು ತಿಳಿದುಬಂದಿದೆ. ಆದರೆ ನಿರಂತರವಾಗಿ ವಾಂತಿಯು ಹೆಚ್ಚಾಗಿ ಹೈಪರ್ ಎಮಿಸಿಸ್ ಗ್ರಾವಿಡೋರಮ್ ಎಂಬ ಹಂತ ತಲುಪಿದರೆ, ಅನಾರೋಗ್ಯ ಹಾಗೂ ನೀರಿನಾಂಶದ ಕೊರತೆಯಿಂದಾಗಿ ಗರ್ಭದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಗುವಿನ ತೂಕ ಕಡಿಮೆಯಾಗುತ್ತದೆ.