ಆ ತಾಯಿಯ ತೇಜಸ್ಸು ಅದೆಷ್ಟು ಪ್ರಖರವೆಂದರೆ ನೊಂದ ಮನಗಳಲ್ಲಿ ಸಕಾರಾತ್ಮಕತೆಯ ಹೊಸ ಕಾಂತಿ ಹುಟ್ಟಿಕೊಳ್ಳುತ್ತದೆ. ತನಗೆ ಯಾರೂ ಇಲ್ಲ ಎಂಬ ಭಾವ ಕಾಡುವವರಿಗೆ ಆಕೆ ವಾತ್ಸಲ್ಯಮಯಿ, ಮಮತಾಮಯಿಯಾಗಿ ಪೊರೆಯುತ್ತಾಳೆ. ಅಧರ್ಮ ಮತ್ತು ದುಷ್ಟಶಕ್ತಿಗಳು ಕಾಣಿಸಿಕೊಂಡರೆ

ರೌದ್ರಾವತಾರದ ಮೂಲಕ ಸಂಹರಿಸುತ್ತಾಳೆ. ಕಲಿಯುಗದಲ್ಲಿಯೂ ತನ್ನ ಅಸೀಮ ಶಕ್ತಿ, ಪವಾಡಗಳ ಮೂಲಕ ಅಸಂಖ್ಯ ಭಕ್ತರ ಹೃದಯದೇವತೆಯಾಗಿರುವ ಶ್ರೀ ಚಂದ್ರಲಾಪರಮೇಶ್ವರಿ ಪ್ರಖರ ಬೆಳಕಾಗಿ, ಭರವಸೆಯಾಗಿ ಎಲ್ಲರನ್ನೂ ಕಾಪಾಡುತ್ತಿದ್ದಾಳೆ. ಅದಕ್ಕೆಂದೇ ಭಕ್ತರು ‘ಚಂದಮ್ಮ ನೀನೇ ನಮಗೆಲ್ಲ ಅಮ್ಮ’ ಎಂದು ಭಕ್ತಿಯಿಂದ ನುಡಿಯುತ್ತಾರೆ.

ಚಂದ್ರಲಾಪರಮೇಶ್ವರಿಯ ಎರಡು ಮಹತ್ವದ ಕ್ಷೇತ್ರಗಳು ಹೈದರಾಬಾದ್-ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿವೆ. ಒಂದು ಸನ್ನತಿ ಮತ್ತೊಂದು ಹೊನಗುಂಟಾ. ಚಿತ್ತಾಪುರ ತಾಲೂಕಿನ ಭೀಮಾತೀರದಲ್ಲಿರುವ ಪುಟ್ಟ ಗ್ರಾಮ ಸನ್ನತಿಯಲ್ಲಿ ಚಂದಮ್ಮಳ ಪಾದುಕೆಗಳಿದ್ದರೆ, ಶಹಾಬಾದ್ನಿಂದ 8 ಕಿ.ಮೀ. ಅಂತರದಲ್ಲಿರುವ ಹೊನಗುಂಟಾದಲ್ಲಿ ಈ ದೇವಿ ಸಾಕ್ಷಾತ್ ಆಗಿ ನೆಲೆಸಿದ್ದಾಳೆ.

ಹಿಂಗುಲಾಂಬಿಕೆಯೇ ಚಂದಮ್ಮ

ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಸೀತಾಸಮೇತನಾಗಿ ಭೀಮಾತೀರದ ಸನ್ನತಿಗೆ ಬಂದು ನಾರಾಯಣ ಹಾಗೂ ಚಂದ್ರವದನೆಯರಾಗಿ ನೆಲೆಸಿದ್ದರು ಎಂಬ ಐತಿಹ್ಯವಿದೆ. ಕುಟೀರವೊಂದರಲ್ಲಿ ಈ ದಂಪತಿ ತಪಸ್ಸು, ದೇವರ ಆರಾಧನೆಯಲ್ಲಿ ತೊಡಗಿಕೊಂಡಿದ್ದರು. ಆಗ ಸೇತುರಾಜ (ಹಿಂದಿನ ಜನ್ಮದಲ್ಲಿ ಈತ ಸಮುದ್ರನಾಥನಾಗಿದ್ದ) ಚಂದ್ರವದನೆಯ ರೂಪಕ್ಕೆ ಆಕರ್ಷಿತನಾಗಿ ತನ್ನನ್ನೇ ವಿವಾಹವಾಗುವಂತೆ ಪೀಡಿಸತೊಡಗಿದ. ಅದೊಂದು ದಿನ ನಾರಾಯಣಮುನಿಗಳು ಸ್ನಾನಕ್ಕೆಂದು ನದಿಗೆ ತೆರಳಿದ್ದಾಗ ವೇಷ ಬದಲಿಸಿಕೊಂಡು ಬಂದ ಸೇತುರಾಜ ‘ನನ್ನ ಜತೆ ನಡೆ’ ಎಂದು ಚಂದ್ರವದನೆಗೆ ಕಾಡತೊಡಗಿದ. ಅದಕ್ಕೆ ಉಪಾಯ ಮಾಡಿದ ಚಂದ್ರವದನೆಯು, ‘ನಾನು ನಲವತ್ತು ದಿನಗಳ ವ್ರತಾಚರಣೆಯಲ್ಲಿದ್ದೇನೆ. ನೀನು ನನ್ನ ಹತ್ತಿರ ಸುಳಿಯಬೇಡ’ ಎಂದು ಹೇಳಿ ಸೇತುರಾಜನಿಂದ ವಾಗ್ದಾನ ಪಡೆದಳು. ಆದರೆ ಧೂರ್ತನಾದ ಸೇತುರಾಜ, ‘ನಿನ್ನ ವ್ರತ ಮುಗಿಯುವರೆಗೂ ನಾನು ಸಮ್ಮನಿರುತ್ತೇನೆ. ಆದರೆ, ನೀನು ಈಗಲೇ ನನ್ನ ರಾಜಧಾನಿಗೆ ಬರಬೇಕು.

RELATED ARTICLES  ಬಾಂಬ್ ಗಾಗಿ ಉತ್ತರಕನ್ನಡದ ಹಲವೆಡೆ ಪೊಲೀಸ್ ಕಾರ್ಯಾಚರಣೆ : ಅದೇಕೆ ಅಂತೀರಾ?

ಅಲ್ಲಿ ಸೋಮೇಶ್ವರ ದೇವಾಲಯದಲ್ಲಿ ವ್ರತ ಕೈಗೊಳ್ಳು. ಆ ಸೋಮೇಶ್ವರ ನಿನಗೆ ಸತ್ಪಲ ಕೊಡುತ್ತಾನೆ’ ಎಂದ. ನಿರುಪಾಯಳಾದ ಚಂದ್ರವದನೆ ಸೋಮೇಶ್ವರ ದೇವಾಲಯದಲ್ಲಿ ವ್ರತ ಕೈಗೊಂಡಳು.

ಇತ್ತ ಕುಟೀರಕ್ಕೆ ಮರಳಿದ ನಾರಾಯಣಮುನಿಗಳು ತಮ್ಮ ತಪೋಬಲದಿಂದ ನಡೆದ ವೃತ್ತಾಂತವನ್ನೆಲ್ಲ ತಿಳಿದುಕೊಂಡರು. ಮುಂದೇನು ಮಾಡಬೇಕೆಂದು ಅರುಹು ಎಂದು ಕುಲದೇವತೆ ಹಿಂಗುಲಾಂಬೆಯನ್ನು ಪ್ರಾರ್ಥಿಸಿದರು. ಕಾಶ್ಮೀರಕ್ಕೆ ತೆರಳಿ ಹಿಗುಲಾಂಬಿಕೆ ಸಾನ್ನಿಧ್ಯದಲ್ಲಿ ಕಠಿಣ ತಪಸ್ಸು ಕೈಗೊಂಡರು. ತಪಸ್ಸಿಗೆ ಒಲಿದ ಹಿಂಗುಲಾಂಬಿಕಾ ‘ನಿನ್ನ ಕಷ್ಟವನ್ನು ಪರಿಹರಿಸಲು ನಿನ್ನೊಡನೆಯೇ ಬರುತ್ತೇನೆ. ಆದರೆ, ನೀನು ಮುಂದೆ ಸಾಗುತ್ತಿರಬೇಕು. ನಾನು ನಿನ್ನನ್ನು ಹಿಂಬಾಲಿಸುತ್ತಿರುತ್ತೇನೆ. ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡಬಾರದು. ನೋಡಿದಲ್ಲಿ, ಆ ಕ್ಷಣವೇ ನಾನು ನಿಂತ ಜಾಗದಲ್ಲೇ ನೆಲೆಸಿಬಿಡುತ್ತೇನೆ’ ಎಂದಳು. ಇದಕ್ಕೆ ಒಪ್ಪಿದ ನಾರಾಯಣಮುನಿಗಳು ಮುಂದೆ ಮುಂದೆ ಸಾಗಿದರೆ ಹಿಂಗುಲಾಂಬಿಕೆ ಅವರ ಹಿಂದೆ ಸಾಗಿದಳು. ಹೀಗೆ ಸನ್ನತಿ ಕಡೆಗೆ ನಡೆದುಕೊಂಡು ಬರುವಾಗ ಚಿತ್ತಾಪುರ ತಾಲೂಕಿನ ಹೊನಗುಂಟಾ ಬಳಿ ದೇವಿಯ ಗೆಜ್ಜೆಯ ಸದ್ದು ಕೇಳದೆ ಇದ್ದಾಗ ನಾರಾಯಣಮುನಿ ಹಿಂತಿರುಗಿ ನೋಡಿದರು. ಹಾಗಾಗಿ, ದೇವಿಯು ಹೊನಗುಂಟಾ ಗ್ರಾಮದ ಬಳಿಯೇ ನೆಲೆಸಿಬಿಟ್ಟಳು.

ಭೃಂಗಗಳಿಂದ ಸೇತುರಾಜನ ಅಂತ್ಯ

ಹೊನಗುಂಟಾ ಬಳಿಯೇ ತನ್ನ ಪಾದುಕೆಗಳನ್ನು ನಾರಾಯಮುನಿಗೆ ನೀಡಿದ ದೇವಿಯು, ಪಾದುಕೆಗಳನ್ನು ಸನ್ನತಿಯಲ್ಲಿ ಪ್ರತಿಷ್ಠಾಪಿಸಿ ತೆಂಗಿನಕಾಯಿ ಒಡೆಯುವಂತೆ, ಆ ತೆಂಗಿನಕಾಯಿಗಳಿಂದ ಐದು ಭೃಂಗಗಳು ಹೊರಬಂದು ಸೇತುರಾಜನನ್ನು ಅಂತ್ಯಗೊಳಿಸುತ್ತವೆ ಎಂದು ಅಭಯವನ್ನಿತ್ತಳು. ಮುನಿಗಳು ದೇವಿ ಹೇಳಿದಂತೆಯೇ ಮಾಡಿದರು. ತೆಂಗಿನಕಾಯಿಯಿಂದ ಹೊರಬಂದ ಭೃಂಗಗಳು ಸೇತುರಾಜನನ್ನು ಬೆನ್ನೆಟ್ಟಿ ಕಚ್ಚಿದವು. ನೋವು ತಡೆದುಕೊಳ್ಳಲಾಗದೆ ಸೇತುರಾಜ ಭೀಮಾನದಿಯಲ್ಲಿ ಮುಳುಗಿ ಜಲಸಮಾಧಿಯಾದ ಎಂಬ ಐತಿಹ್ಯವಿದೆ. ಆ ಜಾಗವನ್ನು ಇಂದಿಗೂ ಸನ್ನತಿಯಲ್ಲಿ ಕಾಣಬಹುದು. ಇದನ್ನು ‘ಸೇತುರಾಜನ ಮಡುವು’ ಎನ್ನುತ್ತಾರೆ. ಆ ಭೃಂಗಗಳು ಮತ್ತೆ ದೇವಿಯ ಪಾದುಕೆಯಲ್ಲಿ ಲೀನವಾದವು. ಪಾದುಕೆಗಳಲ್ಲಿ ಐದು ಭ್ರಂಗಗಳ ಗುರುತನ್ನು ಇಂದಿಗೂ ನೋಡಬಹುದು. ಹಾಗಾಗಿಯೇ, ದೇವಿ ನೆಲೆಸಿರುವ ಹೊನಗುಂಟಾಕ್ಕೂ, ಪಾದುಕೆಗಳು ಪ್ರತಿಷ್ಠಾಪಿತವಾಗಿರುವ ಸನ್ನತಿಗೂ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಅಸಂಖ್ಯ ಭಕ್ತರು ಭೇಟಿ ನೀಡುತ್ತಾರೆ. ಚಂದ್ರಲಾಪರಮೇಶ್ವರಿ ಬಾದಾಮಿ ಚಾಲುಕ್ಯ ಅರಸರ ಕುಲದೇವತೆಯಾಗಿದ್ದಳು. ದೇವಿಯ ಸುಪ್ರಭಾತದಲ್ಲಿ ಇದರ ಪ್ರಸ್ತಾಪ ಬರುತ್ತದೆ.

RELATED ARTICLES  ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಡಾ.ಶ್ರೀನಿವಾಸ ನಾಯಕ ರೆಂಬ ದೇವರು.

ಪುರಾತನ ದೇವಸ್ಥಾನ

ಚಂದ್ರಲಾಪರಮೇಶ್ವರಿಯ ದೇವಸ್ಥಾನ ಚಾಲುಕ್ಯರ ವಾಸ್ತುಶೈಲಿಯಲ್ಲೇ ನಿರ್ವಿುಸಲಾಗಿದೆ. ದೇವಾಲಯದ ಕಟ್ಟಡ ವಿಶಿಷ್ಟವಾಗಿದೆ. ದೇವಿಮೂರ್ತಿಯ ನೇರದರ್ಶನಕ್ಕಿಂತ ಮೊದಲು ಮುಖದರ್ಶನ ಮಾಡುವುದು ಇಲ್ಲಿಯ ವಾಡಿಕೆ. ದೇವಸ್ಥಾನವನ್ನು ಇದೇ ಮಾದರಿಯಲ್ಲಿ ನಿರ್ವಿುಸಲಾಗಿದ್ದು, ಪ್ರವೇಶದ್ವಾರದಲ್ಲಿ ಒಂದು ಅಡ್ಡಗೋಡೆಯಿದ್ದು, ಗೋಡೆಗೆ ಚಿಕ್ಕ ಕಿಂಡಿ ಇದೆ. ಇಲ್ಲಿ ಮುಖದರ್ಶನ ಪಡೆದ ಬಳಿಕ ಎಡಕ್ಕೆ ವಾಲಿದರೆ ಮಂದಿರದ ಮುಖ್ಯಪ್ರಾಂಗಣ ಪ್ರವೇಶಿಸಬಹುದು. ಇಲ್ಲಿಂದ ದೇವಿಯ ಮೂರ್ತಿದರ್ಶನ ಪಡೆಯಬಹುದು.

ವೈಶಿಷ್ಟ್ಯ

ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ವೇಳೆ ಸೂರ್ಯನ ಹೊಂಗಿರಣಗಳು ದೇವಸ್ಥಾನದ ಮುಂದಿರುವ ಧ್ವಜಸ್ತಂಭದ ಮೇಲೆ ಬಿದ್ದು ಗೋಡೆಕಿಂಡಿ ಮುಖಾಂತರ ಚಂದಮ್ಮನ ಮುಖವನ್ನು ರ್ಸ³ಸುವ ಸೊಬಗೇ ಚೆಂದ. ಶುಕ್ರವಾರ ಮತ್ತು ಮಂಗಳವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಕ್ತಾದಿಗಳು ಮತ್ತು ಚಂದಮ್ಮನನ್ನು ಕುಲದೇವತೆಯಾಗಿ ಹೊಂದಿರುವ ಕುಟುಂಬಗಳು ಯಾವುದೇ ಶುಭಕಾರ್ಯದ ಬಳಿಕ ಇಲ್ಲಿ ಭೇಟಿ ನೀಡಿ ದೇವಿಗೆ ಸೀರೆ, ಕುಪ್ಪಸ ಹಾಗೂ ಫಲಪುಷ್ಪಗಳಿಂದ ಉಡಿ ತುಂಬುತ್ತಾರೆ. ವರ್ಷದಲ್ಲಿ ಹಲವು ಉತ್ಸವಗಳು ಇಲ್ಲಿ ನಡೆಯುತ್ತವೆ. ಚೈತ್ರಮಾಸದ ವದ್ಯ ಪಂಚಮಿಯನ್ನು ಇಲ್ಲಿ ದೇವಿ ಪಂಚಮಿಯೆಂದು ಆಚರಿಸಲಾಗುತ್ತದೆ.