ಕಾರವಾರ: ‘ನಾವು ಧರ್ಮದ ಹೆಸರಿನಲ್ಲಿ ಮತ ಕೇಳೋದಿಲ್ಲ. ಅಭಿವೃದ್ದಿ ಮಂತ್ರದಿಂದ ಮತ ಕೇಳುತ್ತೇವೆ. ಹೀಗಾಗಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದರೂ ಕೂಡ ಬಿಜೆಪಿ ಅಧಿಕಾರಕ್ಕೆ ಬರಲ್ಲ’ಹಾಗೂ ಅನಂತಕುಮಾರ್ ಹೆಗಡೆಗೆ ಸಂಸ್ಕೃತಿ ಇಲ್ಲ, ಸಂಸ್ಕಾರನೂ ಇಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸಿ, ಅವರ ಭಾವನೆಗಳನ್ನು ಕೆರಳಿಸಿ ಅಧಿಕಾರ ಹಿಡಿಯ ಬಯಸುವ ನಿಮ್ಮ ಹುನ್ನಾರದಿಂದ ರಾಜ್ಯ ಉದ್ಧಾರ ಆಗಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದಲ್ಲಿ ರೂ. 707 ಕೋಟಿ ವೆಚ್ಚದ ಸುಮಾರು 67 ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಬುಧವಾರ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಸೋತ ಬಳಿಕ ಬಿ.ಎಸ್.ಯಡಿಯೂರಪ್ಪ ಹತಾಶರಾಗಿದ್ದಾರೆ. ಇದರಿಂದಾಗಿ ಅವರ ‘ಮಿಶನ್ 150’ ಠುಸ್ ಆಗಿದೆ. ಇದರ ನಂತರ ಈಗ ಪರಿವರ್ತನಾ ಯಾತ್ರೆ ಎಂದು ಎಲ್ಲರಿಗೂ ಬೈಯ್ಯುತ್ತಾ, ಏಕ ವಚನದಲ್ಲಿ ಮಾತನಾಡಿಸುತ್ತ ತಿರುಗುತ್ತಿದ್ದಾರೆ. ಜಾತಿ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವ, ಜನರನ್ನು ಒಡೆಯುವ ನೀವು ಮೊದಲು ಪರಿವರ್ತನೆಯಾಗಬೇಕು. ಅನಂತಕುಮಾರ್ ಹೆಗಡೆಗೆ ಸಂಸ್ಕೃತಿ ಇಲ್ಲ, ಸಂಸ್ಕಾರನೂ ಇಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸಿ, ಅವರ ಭಾವನೆಗಳನ್ನು ಕೆರಳಿಸಿ ಅಧಿಕಾರ ಹಿಡಿಯ ಬಯಸುವ ನಿಮ್ಮ ಹುನ್ನಾರದಿಂದ ರಾಜ್ಯ ಉದ್ಧಾರ ಆಗಲ್ಲ’ ಎಂದರು.

‘ಬಿಜೆಪಿಯ ಯಡಿಯೂರಪ್ಪ ಪರಿವರ್ತನಾ ಯಾತ್ರೆ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ವಿಕಾಸ ಯಾತ್ರೆ ಮಾಡುತ್ತಿದ್ದಾರೆ. ಆದರೆ ನಮ್ಮದು ‘ಅಭಿವೃದ್ಧಿ ಪರ್ವ’. ಸ್ವಾತಂತ್ರ್ಯ ಬಂದ ನಂತರ ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಇಷ್ಟು ಬೃಹತ್ ಮೊತ್ತದ ಅಭಿವೃದ್ಧಿ ಕಾಮಾಗರಿಗಳಿಗೆ ಉದ್ಘಾಟನೆ, ಶಂಕು ಸ್ಥಾಪನೆ ಮಾಡುತ್ತಿದ್ದೇವೆ. ಆದರೆ ಇದು ಪ್ರಚಾರಕ್ಕಾಗಿ ಮಾಡುತ್ತಿಲ್ಲ’ ಎಂದರು.
‘ಬಿಜೆಪಿಯ 5 ವರ್ಷದ ಅಧಿಕಾರದಲ್ಲಿ ಮೂರು ಮುಖ್ಯಮಂತ್ರಿಗಳು ಏನು ಮಾಡಿದರು? ಕೂಮುವಾದಿಗಳು ನೀವು. ಜನರ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಉಂಟುಮಾಡುವ, ಸಮಾಜದ ಶಾಂತಿಯನ್ನು ಕೆಡಿಸುವವರು. ನಮ್ಮ ವಿರುದ್ಧ ಯಾವುದೇ ಅಲೆ ಈಗಿಲ್ಲ’ ಎಂದರು.
‘5 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರೂ ಕೂಡ ಇಲ್ಲಿನ ಅನಂತಕುಮಾರ ಹೆಗಡೆಯ ಸಾಧನೆ ಸೊನ್ನೆ. ಪ್ರತಿ ಬಾರಿಯೂ ಧರ್ಮದ ಹೆಸರಿನಲ್ಲಿ ಜನರ ಭಾವನೆ ಕೆರಳಿಸಿ ಗೆಲ್ಲುವ ಅವರ ಮಾತಿಗೆ ಜನ ದಾರಿ ತಪ್ಪ ಬಾರದು. ಹನುಮ ಜಯಂತಿನ್ನ ಅವರು ಗುತ್ತಿಗೆ ತೆಗೆದುಕೊಂಡಂತೆ ಮಾಡುತ್ತಿದ್ದಾರೆ. ಎಲ್ಲರೂ ಹಬ್ಬ ಆಚರಿಸುತ್ತಾರೆ. ನಾವೂ ಕೂಡ ಆಚರಣೆ ಮಾಡುತ್ತೇವೆ. ಆದರೆ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಬಾರದು. ನನ್ನ ಹೆಸರಿನಲ್ಲಿಯೂ ರಾಮ ಇದ್ದಾನೆ. ನಾನು ಕೂಡ ಹಿಂದು ಧರ್ಮದವನೇ’ ಎಂದರು.

RELATED ARTICLES  ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸಮಾಜದ ಸಾಮರಸ್ಯತೆಯ ಕೊಂಡಿ-ನಾಗರಾಜ ನಾಯಕ ತೊರ್ಕೆ

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ‘ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಸಾಧನೆ ಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರವಾರ ವಿಭಾಗದಲ್ಲಿ 200, ಶಿರಸಿ ವಿಭಾಗದಲ್ಲಿ 600 ಶಿಕ್ಷಕರ ಕೊರತೆ ಇತ್ತು. ಆದರೆ ನಮ್ಮ ಆಡಳಿತದಲ್ಲಿ ಅತಿಥಿ ಶಿಕ್ಷಕರ ನೇಮಕದ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿದೆ. ವಿವಿಧ ಭಾಗ್ಯಗಳ ಮೂಲಕ ಮನೆ ಮನ ಮುಟ್ಟಿರುವ ನಮ್ಮ ಸರ್ಕಾರ, ಜನರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಮಾಡಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಘೋಷಿಸಿತ್ತು. ಆದರೆ ಈವರೆಗೆ ಯಾವುದೂ ಆಗಿಲ್ಲ. ರಾಜ್ಯದಲ್ಲಿ ನಾಲ್ಕೂವರೆ ವರ್ಷದಲ್ಲಿ 14.5 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇವೆ. ಜಾತಿ ಧರ್ಮದ ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ಸಮಸ್ಯೆಗಳು ದೂರವಾಗುವುದಿಲ್ಲ. ಜಾತ್ಯಾತೀತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ’ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ‘ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು. ಇದರಿಂದ ಬಡವರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ನಮ್ಮ ಸರ್ಕಾರದ ಆಸೆಗಳು ಈಡೇರಿವೆ. ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುತ್ತದೆ’ ಎಂದರು.

RELATED ARTICLES  ಭರತನಾಟ್ಯ ಪರೀಕ್ಷೆಯಲ್ಲಿ ನಿತ್ಯಾ ದಿಂಡೆ ಸಾಧನೆ.

ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ‘2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಆಶ್ವಾಸನೆ ಈಡೇರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒತ್ತು ನೀಡಿದೆ. ಸಂವಿಧಾನವನ್ನು ದುರ್ಬಲಗೊಳಿಸುತ್ತಿರುವ ಕೋಮುವಾದಿಗಳನ್ನು ಜನ ದೂರ ತಳ್ಳಬೇಕಿದೆ’ ಎಂದು ಹೇಳಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ‘ಈ ಹಿಂದಿನ ಸರ್ಕಾರಗಳು ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಜಿಎಲ್‌ಇ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಬಳಿಕ ಜಾಗದ ಸಮಸ್ಯೆ ಸೇರಿದಂತೆ ವಿವಿಧ ಕಾರಣ ನೀಡಿ ಅನೇಕ ವರ್ಷ ಕಳೆದರು ಕಾಲೇಜು ಸ್ಥಾಪನೆ ವಿಚಾರ ನೆನೆಗುದಿಗೆ ಬಿದ್ದಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ಬಜೆಟ್‌ನಲ್ಲಿಯೇ ಇಲ್ಲಿನ ವೈದ್ಯಕೀಯ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿದೆ. ಅದರಿಂದಾಗಿ ಈಗ ಭವ್ಯ ಕಟ್ಟಡ ತಲೆ ಎತ್ತಿದೆ. ಅನೇಕ ಸೇತುವೆ ಕಾಮಗಾರಿಗಳನ್ನು ಸರ್ಕಾರ ಕಾರವಾರ– ಅಂಕೋಲಾ ಕ್ಷೇತ್ರಕ್ಕೆ ಮಂಜೂರಿ ಮಾಡಿಸುವ ಮೂಲಕ ಜನಪರ ಆಡಳಿತ ನೀಡಿದೆ’ ಎಂದರು.
*ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ:* ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರವನ್ನು ಮುಖ್ಯಮಂತ್ರಿ ವಿತರಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಿದ್ಧಪಡಿಸಲಾಗಿದ್ದ ‘ಅಭಿವೃದ್ಧಿಯ ಕಡಲು, ಸಮೃದ್ಧಿಯ ಹೊನಲು’ ವಿಶೇಷ ಹೊತ್ತಿಗೆಯನ್ನು ಇದೇ ವೇಳೆ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಂದೀಪ ತಳೇಕರ್ ಉಪಸ್ಥಿತರಿದ್ದರು.