ಶಿರಸಿ : ಹಿಂದು ದೇವಾಲಯಗಳ ಘಂಟಾನಾದವಿದ್ದಲ್ಲಿ, ಮಸೀದಿ ಇರುಲು ಸಾಧ್ಯವಿಲ್ಲ, ಹಾಗಾಗಿ ಆಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಯಿತು ಎಂದು ಹಿಂಜಾವೇ ಉತ್ತರ ಪ್ರಾಂತ ಸಂಚಾಲಕ ಶಿವಾನಂದ ಬಡಿಗೇರ ಹೇಳಿದ್ದಾರೆ.
1992ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಧ್ವಂಸದ ನೆನಪಿಗಾಗಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಿಂದೂ ಜಾಗರಣ ವೇದಿಕೆ ಶಿರಸಿ, ಹಿಂದೂ ಸಾಮರಸ್ಯಕ್ಕಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸಿತು. ಈ ವೇಳೆ ವಿಜಯ ದಿವಸವನ್ನು ಆಚರಿಸಿ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಸಂಚಾಲಕ ಶಿವಾನಂದ ಬಡಿಗೇರ, ಹಿಂದುಗಳು ಸಂಘಟಿತರಾಗಿ ಇಸ್ಲಾಮಿಕ್ ಗುಲಾಮಿತನವನ್ನು ಹೋಗಲಾಡಿಸಿದ ದಿನ ಇದಾಗಿದೆ. ಹಿಂದೂ ದೇವಾಲಯ ಇದ್ದಲ್ಲಿ, ಘಂಟಾ ನಾದವಿದ್ದಲ್ಲಿ ಮಸೀದಿ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಲಾಯಿತು. ಆಯೋಧ್ಯೆಯಲ್ಲಿದ್ದದ್ದು ಮಸೀದಿಯಲ್ಲ ಅದು ಕೇವಲ ಬಾಬರನ ಗುಲಾಮಿಯ ಕಟ್ಟಡವಾಗಿದೆ ಎಂದರು. ಸಾವಿರಾರು ಜನರ ಬಲಿದಾನದ ಸಂಕೇತವೇ ಕರಸೇವೆಯಾಗಿದೆ. ಹಿಂದುಗಳು ಸಹ ಸಂಘಟಿತರಾಗಬಹುದು ಎಂದು ಜಗತ್ತಿಗೆ ತೋರಿಸಿದ ಘಟನೆ ಕರಸೇವೆಯಾಗಿದೆ ಎಂದರು. ಈಗಿರುವ ರಾಮ ಮಂದಿರವನ್ನು ಭವ್ಯ ಮಂದಿರವಾಗಿ ನಿರ್ಮಾಣ ಮಾಡುವುದೇ ನಮ್ಮ ಉದ್ದೇಶವಾಗಿದೆ. ಹಿಂದೂ ಸಮಾಜದ ಸಂಖ್ಯೆ ಎಂದಿಗೂ ಕಡಿಮೆಯಾಗಬಾರದು. ದೇಶಕ್ಕಾಗಿ ಜೀವಕೊಡುವ ಅವಶ್ಯಕತೆಯಿಲ್ಲ, ಬದಲಾಗಿ ಕನಿಷ್ಟ ಮೂರು ಮಕ್ಕಳನ್ನಾದರೂ ನೀಡಬೇಕು. ಆ ನಿಟ್ಟಿನಲ್ಲಿ ಹಿಂದೂ ಸಮಾಜ ಹೆಜ್ಜೆಯನ್ನಿಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ಶಿರಸಿ ತಾಲೂಕಾ ಸಂಚಾಲಕ ಪ್ರಕಾಶ ಸಾಲೇರ, ಪ್ರೊ. ಕೆ ವಿ ಭಟ್ಟ, ಚಂದ್ರಶೇಖರ ಭಟ್ಟ ಉಪಸ್ಥಿತರಿದ್ದರು.