ಶಿರಸಿ : ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಪಕ್ಷಗಳೆಂಬ ತಾರತಮ್ಯ ಮಾಡದೇ ಅನುದಾನವನ್ನು ನೀಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಇಲ್ಲಿನ ವಿಕಾಸ ಆಶ್ರಮದಲ್ಲಿ ಗುರವಾರ 13 ವಿವಿಧ ಸರ್ಕಾರಿ ಇಲಾಖೆಗಳ 148 ಕೋಟಿ ರೂ.ಗಳಷ್ಟು ಅನುದಾನದ 55 ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ನೋಡದೇ ಅನುದಾನ ಬಿಡುಗಡೆ ಮಾಡಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಜನರು ಆಶೀರ್ವಾದ ನೀಡಿರುವುದು ಮಜಾ ಮಾಡಲು ಅಲ್ಲ. ಬದಲಾಗಿ ಕೆಲಸ ಮಾಡಲು. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಚುನಾವಣೆ ಮೊದಲು 165 ಆಶ್ವಾಸನೆ ನೀಡಿದ್ದೆ. ಅದಕ್ಕೂ ಹೆಚ್ಚು ಬೇಡಿಕೆ ಈಡೇರಿಸಿದ್ದೇನೆ. ನಮ್ಮದು ಬಡವರ ಹಾಗೂ ಅಭಿವೃದ್ದಿ ಪರ ಸರಕಾರ ಎಂದರು.
ರಾಜಕಾರಣಿಗಳು ಬಳಸುವ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಕೆಟ್ಟ ಭಾಷೆಯನ್ನು ಬಳಸಿದರೇ ಜನ ಬೆಳೆಸುವುದಿಲ್ಲ. ರಾಜಕೀಯಕ್ಕೂ ಅದರದ್ದೆ ಆದ ಸಾಂವಿಧಾನಿಕ ಭಾಷೆಯಿದೆ. ಅದನ್ನು ನಾವು ಉಪಯೋಗಿಸಬೇಕು. ಅಧಿಕಾರ ಬರುತ್ತದೆ ಹೋಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅದು ಸಹಜ. ಆದರೆ ರಾಜಕೀಯ ಭಾಷೆಯಲ್ಲಿ ಹಿಡಿತ ಇರಬೇಕು ಎಂದು ಬಿಜೆಪಿ ನಾಯಕರಿಗೆ ಅವರು ಟಾಂಗ್ ನೀಡಿದರು. ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ಧರ್ಮ ವನ್ನೇ ರಾಜಕೀಯ ಮಾಡಿಕೊಳ್ಳಬಾರದು. ಧರ್ಮದ ಹೆಸರಲ್ಲಿ ಯಾವಾಗಲೂ ರಾಜಕೀಯ ಮಾಡಬಾರದು. ಎಲ್ಲಾ ಧರ್ಮದವರನ್ನು ಕೂಡಿಕೊಂಡು ಬಾಳ್ವೆ ಮಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಕೋಮು ಗಲಭೆಗಳು ಹೆಚ್ಚಾಗಿ ನಡೆಯುತ್ತದೆ. ಚುನಾವಣೆ ಬಂದು ಹೋಗುತ್ತದೆ. ಆದರೆ ಯಾರ ಮೇಲೂ ದೌರ್ಜನ್ಯ ಮಾಡಬಾರದು ಎಂದರು. ಬಡವರ ಬಡತನ ನಿರ್ಮೂಲನೆ ಆಗಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಅಭಿವೃದ್ಧಿ ಯುಗ ಪ್ರಾರಂಭವಾಗಿದ್ದು ಕಾಂಗ್ರೆಸ್ ನಿಂದ. ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಲೊಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿ ಧರ್ಮಸಂಸತ್ ಹೇಳಿಕೆಗಳು ಸಂವಿಧಾನಕ್ಕೆ ಅಪಾಯ ತರುವಂತಹದ್ದಾಗಿದೆ. ನಮ್ಮ ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವ ಸರ್ಕಾರವಾಗಿದೆ. ಸಂವಿಧಾನಕ್ಕಿಂತ ದೊಡ್ಡ ಗ್ರಂಥ ಇನ್ನೊಂದಿಲ್ಲ. ಸಂವಿಧಾನಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಹೇಳಬಾರದು ಎಂದರು.
ಸಭಾಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯಲ್ಲಿ ಸೇರಿದಂತೆ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದೆ. ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ವಿತರಣೆ, ಇ-ಸ್ವತ್ತು ಹಾಗೂ ಫಾರ್ಮ ನಂ.3 ಸಮಸ್ಯೆ ನಿವಾರಣೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಮಾತೃಪೂರ್ಣ ಯೋಜನೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರಿ ಮೊಗೇರ, ಸದಸ್ಯರಾದ ಬಸವರಾಜ ದೊಡ್ಮನಿ, ಸುಮಂಗಲಾ ನಾಯ್ಕ, ಉಷಾ ಹೆಗಡೆ, ಪ್ರಭಾವತಿ ಗೌಡ, ಜಿ.ಎನ್.ಹೆಗಡೆ, ಶಿರಸಿ ನಗರಸಭೆ ಅಧ್ಯಕ್ಷೆ ಅರುಣಾ ವೆರ್ಣೇಕರ್, ಶಿರಸಿ ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸಿದ್ದಾಪುರ ತಾಪಂ ಅಧ್ಯಕ್ಷ ಸುಧೀರ ಗೌಡ, ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ, ಭಟ್ಕಳ ಶಾಸಕ ಮಂಕಾಳು ವೈದ್ಯ, ಕುಮಟಾ ಶಾಸಕಿ ಶಾರದಾ ಶೆಟ್ಟಿ, ಕಾರವಾರ ಶಾಸಕ ಸತೀಶ ಸೈಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರಮುಖರಾದ ಸಿ.ಎಫ್.ನಾಯ್ಕ, ನಿವೇದಿತ ಆಳ್ವಾ, ವಾಕರಸಾ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗಣ್ಣನವರ್ ಮುಂತಾದವರು ಇದ್ದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಉತ್ತರ ಕನ್ನಡ ವತಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.