ಯಲ್ಲಾಪುರ: ಕೃಷಿ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತನೊಬ್ಬ ರೈತರಿಗೆ ನೀಡಬೇಕಾದ ಲಕ್ಷಾಂತರ ರೂ ಸಬ್ಸಿಡಿ ಹಣವನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡು ವಂಚಿಸಿದ ಹಿನ್ನೆಲೆಯಲ್ಲಿ ಅಮಾನತ್ ಮಾಡಲಾಗಿದ್ದು, ಆತನ ವಿರುದ್ಧ ತಡವಾಗಿ ಪೊಲೀಸ್ ಕ್ರಿಮೀನಲ್ ಪ್ರಕರಣ ದಾಖಲಾಗಿದೆ.
ಕೃಷಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹರ್ಷ. ಎಸ್. ಲಿಂಗದಾಳ ಎಂಬಾತ ರೈತರಿಗೆ ವಿತರಿಸಲು ಕೃಷಿ ಸಹಾಯಧನ ರೂಪದಲ್ಲಿ ಬಂದ 11, 872,83 ರೂ. ಹಣವನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡು ವಂಚಿಸಿದ್ದಾನೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂದೆಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ನೌಕರಿ ಪಡೆದ ಈತ ಕಳೆದ 3-4 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ. ಕರ್ತವ್ಯದ ದುರುಪಯೋಗ ಮಾಡುತ್ತಿರುವುದು ಕಳೆದ ವರ್ಷ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣ ಅಮಾನತು ಮಾಡಲಾಗಿದೆ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿ.ಜಿ.ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಧಿಕಾರಿಗಳು ಇಲಾಖೆಯ ಗೌರವ ಉಳಿಸಿಕೊಳ್ಳಲು ಈ ವಿಷಯವನ್ನು ಎಲ್ಲಿಯೂ ಬಹಿರಂಗ ಪಡಿಸದೇ ಆಂತರಿಕವಾಗಿ ತನಿಖೆ ನಡೆಸಿದ್ದು, ಇಷ್ಟು ದೊಡ್ಡ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಪ್ರಕರಣವನ್ನು ಬಹಿರಂಗಗೊಳಿಸದೇ ಆಂತರಿಕವಾಗಿ ತನಿಖೆ ನಡೆಸಿ, ತಡವಾಗಿ ದೂರು ನೀಡಿರುವ ಮೇಲಧಿಕಾರಿಗಳ ನಡೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.