ಕಾರವಾರ: ಕರಾವಳಿ ಉತ್ಸವದ ನಿಮಿತ್ತ ಇಲ್ಲಿನ ಐಎನ್‌ಎಸ್‌ ಚಾಪೆಲ್‌ ಯುದ್ಧನೌಕೆ ವಸ್ತು ಸಂಗ್ರಹಾಲಯದಲ್ಲಿ ತೋಟಗಾರಿಕೆ ವತಿಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಜಲಕೃಷಿ (ಹೈಡ್ರೋಫೋನಿಕ್ಸ್) ತಂತ್ರಜ್ಞಾನ ರೈತರ ಗಮನಸೆಳೆಯುತ್ತಿದೆ.

‘ಮಣ್ಣಿನ ಸಹಾಯವಿಲ್ಲದೇ ಕೇವಲ ಪೋಷಕಾಂಶ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು ಬೆಳೆಸುವ ವಿಧಾನವೇ ಜಲಕೃಷಿ. ನೆಲ ಸಸ್ಯಗಳ ಬೇರುಗಳನ್ನು ನೇರವಾಗಿ ಪೋಷಕ ದ್ರವದಲ್ಲಿ ಅದ್ದುವ ಮೂಲಕ ಸಸ್ಯಗಳನ್ನು ಬೆಳೆಸಬಹುದಾಗಿದ್ದು, ಇದಕ್ಕಾಗಿಯೇ ವಿಶೇಷವಾದ ವ್ಯವಸ್ಥೆ ಮಾಡಲಾಗುತ್ತದೆ.

‘ಬೆಂಗಳೂರಿನಂಥ ನಗರಗಳಲ್ಲಿ ತಾರಸಿ ಮೇಲೆ ಜಲಕೃಷಿ ವಿಧಾನದ ಮೂಲಕ ಸೊಪ್ಪುಗಳನ್ನು ಬೆಳೆಯಲಾಗುತ್ತಿದೆ. ಉತ್ತರ ಕನ್ನಡ ಶಿರಸಿಯಲ್ಲಿ ಈ ವಿಧಾನದ ಮೂಲಕ ಮೇವು ಬೆಳೆಯಲಾಗುತ್ತಿದ್ದು, ಆಕಳು ನೀಡುವ ಹಾಲಿನ ಪ್ರಮಾಣವು ಹೆಚ್ಚಳವಾಗಿದೆ. ಈ ವಿಧಾನಕ್ಕೆ ನೀರು ಹೆಚ್ಚು ಬೇಕಾಗಿಲ್ಲ. ಇಳುವರಿ ಹೆಚ್ಚು ಹಾಗೂ ಸ್ಥಿರವಾಗಿರುತ್ತದೆ. ಕಳೆಗಳ ಸಮಸ್ಯೆ ಇಲ್ಲ, ಕೀಟಬಾಧೆ ತುಂಬಾ ಕಡಿಮೆ. ಆರೋಗ್ಯವಂತ ಸಸ್ಯಗಳನ್ನು ಬೆಳೆಸಲು ಈ ವಿಧಾನ ತುಂಬಾ ಸಹಕಾರಿಯಾಗಿದೆ’ ಎಂದು ವಿವರಿಸಿದರು.

RELATED ARTICLES  ಯಕ್ಷಗಾನದ ಮೂಲಕ ಗಮನ ಸೆಳೆದ ಮಾಗೋಡಿನ ಕು. ಶ್ರೀಗಣೇಶ ಸುಬ್ರಾಯ ಹೆಗಡೆ

ಕೆಂಪು, ಬಿಳಿ ಹಾಗೂ ಹಳದಿ ಗುಲಾಬಿ ಹೂವುಗಳನ್ನು ಬಳಸಿ ‘ಸುಕೋಯ್‌’ ಯುದ್ಧ ವಿಮಾನ ಮಾದರಿಯನ್ನು ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಇನ್ನೂ ಕೆಂಪು ಗುಲಾಬಿಗಳಿಂದ ಹೃದಯದ ಮಾದರಿಯ ಕಲಾಕೃತಿಯನ್ನು ರಚಿಸಲಾಗಿದೆ. ಕಾರ್ನೇಶನ್‌ ಹೂವುಗಳನ್ನು ಬಳಸಿ, ಜಿರಾಫೆ, ಹಾರ್ನ್‌ಬಿಲ್‌ ಕಲಾಕೃತಿಯನ್ನು ಮಾಡಲಾಗಿದೆ. ಶಿವಮೊಗ್ಗದ ತರೀಕೆರೆಯ ಕಲಾವಿದ ಕೃಷ್ಣಪ್ಪ ಬಾಳೆದಿಂಡಿನಿಂದ ತೇರಿನಾಕಾರದ ದೋಣಿ, ಪಡುಬಿದ್ರಿಯ ಭರತ್ ಎಸ್. ಅವರು ಕಲ್ಲಂಗಡಿಯಲ್ಲಿ, ಹುಬ್ಬಳ್ಳಿಯ ಇಸ್ಮಾಯಿಲ್ ಅವರು ತರಕಾರಿಗಳಿಂದ ಮಾಡಿರುವ ವಿವಿಧ ಕಲಾಕೃತಿಗಳು ಆಕರ್ಷಣೀಯವಾಗಿದೆ.

ಈ ಪ್ರದರ್ಶನಕ್ಕಾಗಿ ಸುಮಾರು 30 ಮಂದಿ ಕಳೆದ ಎರಡು ದಿನಗಳಿಂದ ಹಗಲಿರುಳು ದುಡಿದಿದ್ದಾರೆ. ರಾಜ್ಯದ ನಾನಾ ಭಾಗದ 6 ಮಂದಿ ಕಲಾವಿದರು ಇಲ್ಲಿ ಕಲಾಕೃತಿಗಳನ್ನು ತಯಾರು ಮಾಡಿದ್ದಾರೆ. ಹೈದರಾಬಾದ್‌ನ ಪದ್ಮಾ ಸೀಡ್ಸ್, ಬೆಂಗಳೂರಿನ ಪುಷ್ಯವಾಹಿನಿ, ಶಿರಸಿಯ ಸಸ್ಯ ನರ್ಸರಿ ಅವರಿಂದ ಮಳಿಗೆಗಳನ್ನು ತೆರೆದು, ವಿವಿಧ ಜಾತಿಯ ಗಿಡ, ಬೀಜ, ಕೃಷಿ ಸಲಕರಣೆಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಪ್ರದರ್ಶನದ ವೀಕ್ಷಣೆಗೆ ಜಿಲ್ಲೆಯ ರೈತರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಇಲಾಖೆ ವತಿಯಿಂದ ಆಹ್ವಾನ ನೀಡಲಾಗಿದೆ. ಪ್ರದರ್ಶನದ ವೀಕ್ಷಣೆಗೆ ಬರುವವರಿಗೆ ಸಂಪೂರ್ಣ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆಯಿಂದ ಸಿಬ್ಬಂದಿಯನ್ನು ನೇಮಿಸಲಾಗಿದೆ.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಶುಭಾರಂಭ: ಜನ ಮನ ಗೆದ್ದ ವೈವಿದ್ಯಮಯ ಕಾರ್ಯಕ್ರಮಗಳು.

ಪಡುಬಿದ್ರಿಯ ಭರತ್ ಎಸ್.ಕುಮಾರ್ ಅವರು ಕಲ್ಲಂಗಡಿಯಲ್ಲಿ ಸುಮಾರು 30ಕ್ಕೂ ಅಧಿಕ ಕಲಾಕೃತಿಗಳನ್ನು ರಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ಯಕ್ಷಗಾನದ ಮೇರುನಟ ಚಿಟ್ಟಾಣಿ ರಾಮಚಂದ್ರ ಹೆಗಡೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಹೋಲುವ ಕಲಾಕೃತಿಗಳು ಗಮನಸೆಳೆಯುತ್ತಿವೆ.