ಶಿರಸಿ: ಕಳೆದ ಕೆಲವು ದಿನದಿಂದ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಕಂಡುಬರುತ್ತಿದೆ. ಕಾಂಗ್ರೆಸಿನ ಅಲ್ಪಸಂಖ್ಯಾತರ ಒಲೈಕೆಯ ಪರಿಣಾಮ ಜಿಲ್ಲೆಯ ಜನರು ಘಾಸಿಗೆ ಒಳಗಾಗಿದ್ದಾರೆ. ಶತ್ರುಗಳು ಐಸಿಸ್ ಮಾದರಿಯಲ್ಲಿ ಹಲಾಲ್ ಮಾಡಿದ್ದಾರೆ. ಉತ್ತರ ಕನ್ನಡದ ಶಾಂತ ಹಾಗೂ ಪ್ರಬುದ್ಧ ಜನತೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಇಂದು ಅವರು ತಮ್ಮ ನಿವಾಸದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿ, ಘಟನೆ ಕುರಿತಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಮಾಜದ ಬಾಂದವರಿಗೆ ಪರೇಶನ ಕೊಲೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಸಭ್ಯತೆ ತಲೆ ತಗ್ಗಿಸುವಂತೆ ಆಗಿದೆ. ಸಾಮಾಜಿಕ ಸಂಘಟನೆಗಳು ಸರ್ಕಾರದ ವಿರುದ್ಧ ಸಿಗಬೇಕಾದ ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಜನರ ಭಾವನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಕಾಪಾಡಲು ಜಿಲ್ಲಾಡಳಿತ ವಿಫಲವಾಗಿದೆ. ಈ ವಿಷಯದಲ್ಲಿ ಜಿಲ್ಲಾಡಳಿತವನ್ನು ದೂರಲಾರೆ. ರಾಜ್ಯದ ಕಾಂಗ್ರೆಸ್ ಸಂಪೂರ್ಣ ಜವಾಬ್ದಾರಿ ಹೊತ್ತು, ಅಲ್ಪಸಂಖ್ಯಾತರ ಓಲೈಕೆ ಕಡಿಮೆ ಮಾಡಿ ಹಿಂದುಗಳನ್ನು ನ್ಯಾಯ ದೊರಕಿಸಿಕೊಡಬೇಕಿದೆ. ದಿನೇ ದಿನೇ ಪ್ರತಿಭಟನೆಯ ಕಾವು ಏರುತ್ತಿದೆ. ಜನ ಸಿಗಬೇಕಾದ ನ್ಯಾಯಕ್ಕೋಸ್ಕರ ಬೇಡಿಕೆ ಇಡ್ತಿದಾರೆ. ಸರ್ಕಾರ ಎಚ್ಚೆತ್ತು ಉ.ಕ ಹಾಗೂ ರಾಜ್ಯದಲ್ಲಿ ಬೀಡು ಬಿಟ್ಟ ಸಮಾಜಘಾತಕ ಮೂಲಗಳ ಬೇರುಗಳನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಇಂತಹ ಅಮಾನವೀಯವಾಗಿ ಕಗ್ಗೋಲೆ ನಡೆಯಬಾರದು.
ಶಾಂತಿ ಸಹನೆಯಿಂದ ಪ್ರತಿಭಟನೆ ಮಾಡುವವರ ಭಾವನೆಗೆ ಗೌರವ ನೀಡಬೇಕು. ರಾಜಕೀಯ ಮಾಡದೆ ನ್ಯಾಯ ಮತ್ತು ನೀತಿಯಿಂದ ನಡೆದುಕೊಳ್ಳಬೇಕು. ಜಿಲ್ಲೆ ಜನ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಯ ಮೂಲಕ ಸರ್ಕಾರದ ಎದುರು ಮನಸ್ಸಿಗೆ ಆದ ಘಾಸಿ ಕುರಿತು ಸರ್ಕಾರಕ್ಕೆ ಸ್ಪಷ್ಟ ಭಾಷೆಯಲ್ಲಿ ತಿಳಿಸಬೇಕು ಎಂದು ಅವರು ಹೇಳಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ಜಿಲ್ಲಾ ಅಧ್ಯಕ್ಷ ಕೆ ಜಿ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.