ಬೆಂಗಳೂರು: ತಮ್ಮ ಸಹೋದ್ಯೋಗಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಸೆಕ್ಸ್ ಮತ್ತು ಕ್ರೈಂ ಅನ್ನೇ ಬಂಡವಾಳ ಮಾಡಿಕೊಂಡಿದ್ದ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಗ್ನಿ ಶ್ರೀಧರ್, ಪತ್ರಿಕೋದ್ಯಮದ ಪ್ರಾಥಮಿಕ ನೀತಿ ಮರೆತು ಬೆಳೆಗೆರೆ ಪತ್ರಿಕೆ ನಡೆಸುತ್ತಿದ್ದ. ಜನರಿಗೆ ಸೆಕ್ಸ್, ಕ್ರೈಂ ಬಗ್ಗೆ ಆಸಕ್ತಿ ಇರುತ್ತೆ ಎಂದು ಅದನ್ನೇ ಬಂಡವಾಳ ಮಾಡಿಕೊಂಡಿದ್ದ . ಹೀಗಾಗಿ ರವಿ ಬೆಳಗೆರೆ ಒಂದು ರೀತಿ ಕನ್ನಡದ ಸನ್ನಿ ಲಿಯೋನ್ ಎಂದು ವ್ಯಂಗ್ಯವಾಡಿದ್ದಾರೆ.
ಒಂದು ಕಾಲದಲ್ಲಿ ಹಾಯ್ ಬೆಂಗಳೂರು 8 ಲಕ್ಷ ಪ್ರಸಾರ ಸಂಖ್ಯೆ ಹೊಂದಿತ್ತು. ಸೆಕ್ಸ್, ಕ್ರೈಂ ಅನ್ನೇ ವಿಜೃಂಬಿಸಿ ಪತ್ರಿಕೋದ್ಯಮ ನಡೆಸುತ್ತಿದ್ದ. ಅಷ್ಟೇ ಅಲ್ಲ ರೌಡಿಗಳ ನಡುವೆ ದ್ವೇಷ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದ. ಪತ್ರಿಕೋದ್ಯಮದ ಹೆಸರಿನಲ್ಲಿ ಬೆಳಗೆರೆ ಪಾತಕ ಜಗತ್ತು, ವೇಶ್ಯೆಯರು ಹೀಗೆ ಎಲ್ಲರನ್ನೂ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದರು.
ಪತ್ರಿಕಾರಂಗ ರವಿ ಬೆಳಗೆರೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪಾಪಿಗಳ ಲೋಕ ಅವರಿಗೆ ಹೆಸರು ತಂದುಕೊಟ್ಟಿತು. ಸೆಕ್ಸ್ ಮತ್ತು ಕ್ರೈಮ್ ನಿಂದ ಗುಂಪುಗಳ ಮಧ್ಯೆ ವೈಷಮ್ಯ ಬೆಳೆಸುತ್ತಿದ್ದರು. ಬಚ್ಚನ್ ಮತ್ತು ರಾಜೇಂದ್ರ ಅವರ ಕಡೆಯಿಂದ ರವಿ ಬೆಳಗೆರೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಅವರು ಶಿಸ್ತಿಲ್ಲದ ಜೀವನ ನಡೆಸುತ್ತಿದ್ದರು. ಬಲರಾಮ ಅವರ ಒತ್ತಾಯದ ಮೇರೆಗೆ ನಾನು ಬೆಳಗೆರೆ ಅವರನ್ನು ಭೇಟಿಮಾಡಿದೆ. ಒಂದೊಂದು ಕ್ಷಣಕ್ಕೆ ಒಂದೊಂದು ಮಾತು ಆಡುವ ರವಿ ಅವರ ಮಾತು ನನಗೆ ಅಸಹ್ಯ ಹುಟ್ಟಿಸುತ್ತಿತ್ತು ಎಂದು ರವಿ ಬೆಳಗೆರೆ ಮತ್ತು ತಮ್ಮ ನಡುವಿನ ಒಡನಾಟವನ್ನು ಸ್ಮರಿಸಿದರು.
ರವಿ ಬೆಳಗೆರೆ ಮೇಲೆ ನನಗೆ ವೈಷಮ್ಯ ಇಲ್ಲ, ಸಿಟ್ಟೂ ಇಲ್ಲ, ಬೆಳಗೆರೆಯಿಂದ ಪ್ರಭಾವಿತರಾದವರ ಬಗ್ಗೆ ನನಗೆ ಅನುಕಂಪವಿದೆ. ಭಾವುಕತೆಯಿಂದ ಒಳ್ಳೆಯದನ್ನೂ ಬರೆದಿದ್ದ ಆದರೆ ಕ್ರೈಂ ಅವನನ್ನು ಸಂಪೂರ್ಣ ಆವರಿಸಿದೆ ಎಂದು ಶ್ರೀಧರ್ ಹೇಳಿದರು.