ಕುಮಟಾ ; ಹೊನ್ನಾವರದಲ್ಲಿ ನಡೆದ ಪರೇಶ ಸಾವಿಗೆ ಸಂಬಂಧಿಸಿ ನಿನ್ನೆ ಕುಮಟಾದಲ್ಲಿ ಉಂಟಾಗಿದ್ದ ಗಲಬೆ ಹಾಗೂ ಉದ್ವಿಘ್ನ ಪರಿಸ್ಥಿತಿ ಇಂದು ತಕ್ಕ ಮಟ್ಟಿಗೆ ಶಾಂತವಾಗಿದ್ದು ಇಂದು ಸಹಜ ಸ್ಥಿತಿಗೆ ಕುಮಟಾ ಮರಳಿದೆ.
ಹೊನ್ನಾವರ ತಾಲೂಕಿನ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿತ್ತು. ಸೋಮವಾರ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂ ಸಂಘಟನೆಗಳು ಬಂದ್ ಆಚರಣೆ ಮಾಡಿದ್ದು ಕೆಲ ಕಡೆ ಹಿಂಸಾಚಾರ ಸಂಭವಿಸಿತ್ತು. ಕುಮಟಾದಲ್ಲಿ ಬಂದ್ ವೇಳೆ ಅಹಿತಕರ ಘಟನೆ ಹಾಗೂ ಹಿಂಸಾಚಾರ ಸಂಭವಿಸಿತ್ತು.
ಈ ಸಂದರ್ಭದಲ್ಲಿ ಅನೇಕ ವಾಹನಗಳನ್ನು ಜಖಂಗೊಳಿಸಿದ್ದ ಪ್ರತಿಭಟನಾ ಕಾರರನ್ನು ತಡೆಯಲು ಪೊಲೀಸರು ಹರ ಸಾಹಸ ಪಡಬೇಕಾಗಿತ್ತು. ಪೊಲೀಸರು ಕಲ್ಲು ತೂರಾಟದಿಂದಾಗಿ ಗಾಯಗೊಂಡಿದ್ದರು. ಪ್ರತಿಭಟನಾನಿರತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಅಶ್ರುವಾಯು ಸಿಡಿಸಿದ್ದರು.
೧೨ರಿಂದ ೧೪ರವರೆಗೆ ಮೂರು ದಿನಗಳು ಉತ್ತರ ಕನ್ನಡ ಜಿಲ್ಲಾದ್ಯಂತ ಯಾವುದೇ ಸಭೆ, ಸಮಾರಂಭ, ಮೆರವಣಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲಾದ್ಯಂತ ೧೧ ತಾಲೂಕುಗಳಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆಗಳು, ಬೈಕ್ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಪೊಲೀಸ್ ಕಾಯ್ದೆ ೧೯೫೩ ಕಲಂ ೩೫ರಡಿಯಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರ ಬಳಿಸಿ ನಿಷೇಧಾಜ್ಞೆ ಆದೇಶಿಸಲಾಗುತ್ತಿದ್ದು, ಅದೇಶ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಪರಿಸ್ಥಿತಿ ಸುಧಾರಿಸಿ ಕುಮಟಾ ಸಹಜ ಸ್ಥಿತಿಗೆ ಮರಳಲಿ, ಸಹೋದರತ್ವ ಚಿಗುರೊಡೆಯಲಲಿ ಎಂಬುದೇ ಎಲ್ಲರ ಆಶಯ.