ಮುಂಡಗೋಡ : ಬೌದ್ಧ ಧರ್ಮ ಹಾಗೂ ಟಿಬೆಟ್ ಶಿಕ್ಷಣವನ್ನು ಜೀವಂತವಾಗಿಡುವಲ್ಲಿ ಸಫಲರಾಗಿದ್ದೇವೆ ಎಂದು ಟಿಬೇಟಿಯನ ಧರ್ಮಗುರು ದಲಾಯಿಲಾಮಾ ಹೇಳಿದರು.ತಾಲೂಕಿನ ಟಿಬೆಟಿಯನ ಕಾಲೋನಿಯ ಲಾಮಾ ಕ್ಯಾಂಪ್ ನಂ.2ರ ಡ್ರೆಪುಂಗ್ ಲಾಚಿ ಬೌದ್ಧ ಮಂದಿರದಲ್ಲಿ ಪೂಜೆ ಸಲ್ಲಿಸಿ, ಬೌದ್ಧ ಸನ್ಯಾಸಿಗಳಿಗೆ ಆಶೀರ್ವಚನ ನೀಡಿದರು.
ಬೌದ್ಧ ಧರ್ಮವು ಭಾರತದ ನಳಂದದಿಂದ ಉಗಮವಾಗಿ ಪೂರ್ತಿ ಏಷ್ಯ ಖಂಡದಲ್ಲಿ ವ್ಯಾಪಿಸಿತ್ತು. ಟಿಬೆಟ್‍ನಲ್ಲಿ ಬೌದ್ಧ ಧರ್ಮ ಪ್ರಚಲಿತಗೊಂಡು ವಿಕಾಸವಾಯಿತು. ಇಲ್ಲಿಗೆ ಬಂದು ಹಿರಿಯ ಬೌದ್ಧ ಮುಖಂಡರನ್ನು ಭೇಟಿಯಾಗಿರುವದು ಸುಮಾರು 80-90ವರ್ಷದ ಬೌದ್ಧ ಭಿಕ್ಕುಗಳನ್ನು ಕಂಡು ಸಂತಸವಾಗಿದೆ.
20ನೇ ಶತಮಾನದ ಆರಂಭದಲ್ಲಿ ಟಿಬೆಟ್‍ನಲ್ಲಿ ಪರಿಸ್ಥಿತಿ ಹದಗೆಟ್ಟು ಸುಮಾರು ಒಂದು ಲಕ್ಷ ಟಿಬೆಟಿಯನರು ನಿರಾಶ್ರಿತರಾಗಿ ಭಾರತಕ್ಕೆ ವಲಸೆ ಬಂದರು. ಬೌದ್ಧ ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ಬೌದ್ಧ ಶಿಕ್ಷಣವನ್ನು ಸುರಕ್ಷಿತವಾಗಿಡುವಲ್ಲಿ ಸಾಧ್ಯವಾಗಿದೆ. ಭಾರತದಲ್ಲಿ ಬಹುತೇಕ ಕಡೆ ಬೌದ್ಧ ಧರ್ಮದ ಸಂಸ್ಕೃತಿ ಯನ್ನು ಕಾಣಬಹುದಾಗಿದೆ ಎಂದರು.
ಇಂದು ಕಾಲ ಬದಲಾಗಿದೆ ಧರ್ಮವನ್ನು ಕೇವಲ ತಿಳಿದುಕೊಂಡರೆ ಸಾಲದು ಅದನ್ನು ಅನ್ವಯ ಮಾಡಿಕೊಳ್ಳಬೇಕಾಗಿದೆ. ಇದರರ್ಥ ಕೇವಲ ಮಂತ್ರ ಜಪಿಸಿದರೆ ಸಾಲದು ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಟಿಬೆಟ್ ಸಂಘರ್ಷ ಹಿಂಸಾತ್ಮಕವಾಗಿದ್ದು ಅದನ್ನು ಕರುಣೆ, ಅಹಿಂಸಾ, ವಿಶ್ವಾಸದಿಂದ ಮಾತ್ರ ಬಗೆಹರಿಸಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ಮಾನವ ಜಾತಿ ಉಳಿಯಲು ಸಾಧ್ಯ. ಸಂಕಷ್ಟದ ಸಮಯವು ಟಿಬೆಟಿಯನರಿಗೆ ಒಂದು ಪಾಠವಾಗಿದೆ, ಸಂದಿಗ್ಧ ಸಮಯದಲ್ಲಿ ಹೇಗೆ ಬದುಕಬೇಕೆನ್ನುವದನ್ನು ಜೀವನ ನಮಗೆ ಕಲಿಸಿದೆ. ನಿರಾಶ್ರಿತರಾಗಿ ಬಂದ 55ವರ್ಷಗಳಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಗಿದೆ ಎಂದರು.