ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಬಲಾಢ್ಯವಾಗಿ ಬೆಳೆಯಲು ಶಿಕ್ಷಣವೇ ಪ್ರಮುಖವಾಗಿದೆ. ಸಮಾಜದ ಪರಿವರ್ತನೆಯಲ್ಲಿ ಶಿಕ್ಷಣವೇ ಮುಖ್ಯವಾಗಿದ್ದು, ಆದ್ದರಿಂದ ಶಿಕ್ಷಣಕ್ಕೆ ನೀಡಿರುವಷ್ಟು ಆದ್ಯತೆ ಯಾವೊಂದು ಕ್ಷೇತ್ರಕ್ಕೆ ನೀಡಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಖಾನಟ್ಟಿ ಗ್ರಾಮದಲ್ಲಿ ಜರುಗಿದ ಸರಕಾರಿ ಪ್ರೌಢ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶದ ಪ್ರತಿಭೆಗಳು ಶೈಕ್ಷಣಿಕವಾಗಿ ಮುಂದೆ ಬರಲು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಂತಾಗಬೇಕು. ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿಯೂ ಶೈಕ್ಷಣಿಕವಾಗಿ ಗುಣಾತ್ಮಕ ಹಾಗೂ ಗುಣಮಟ್ಟದ ಶಿಕ್ಷಣ ನೀಡಿದರೆÉ ಮಾತ್ರ ಭವ್ಯ ಪ್ರಜೆಗಳ ನಿರ್ಮಾಣ ಸಾಧ್ಯ. ಈ ದಿಸೆಯಲ್ಲಿ ಖಾನಟ್ಟಿಯ ಸರಕಾರಿ ಪ್ರೌಢ ಶಾಲೆಯು 25 ನೇ ವಸಂತಕ್ಕೆ ಕಾಲಿಡುವ ಮೂಲಕ ಬೆಳ್ಳಿ ಹಬ್ಬ ಆಚರಿಸುತ್ತಿರುವದು ಶ್ಲಾಘನೀಯ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ವಿವಿದೆಡೆ ತಮ್ಮ ಕಾರ್ಯಕ್ಷೇತ್ರಗಳಲ್ಲಿ ದುಡಿಯುವ ಮೂಲಕ ಸ್ವಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಮುಂದೆಯೂ ಇಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಹೊಂದಿ ಹುಟ್ಟೂರಿನ ಕೀರ್ತಿತರುವ ಕೆಲಸ ಮಾಡಲಿ ಎಂದು ಆಶಿಸಿದರು.

ಘಟಪ್ರಭಾ ಎಡದಂಡೆ ಕಾಲುವೆ ಕೊನೆಯ ಭಾಗದ ರೈತರಿಗೆ ಹಿಡಕಲ್ ಜಲಾಶಯದ ನೀರು ಮುಟ್ಟಬೇಕೆಂಬುದು ನನ್ನ ಆಶಯವಾಗಿದ್ದು, ಖಾನಟ್ಟಿ, ಮುನ್ಯಾಳ, ಹಳ್ಳೂರ, ಶಿವಾಪೂರ, ರಂಗಾಪೂರ, ಸೈದಾಪೂರ, ಕಪ್ಪಲಗುದ್ದಿ ಮುಂತಾದ ಗ್ರಾಮಗಳ ರೈತರಿಗೆ ಸಮರ್ಪಕವಾಗಿ ಜಮೀನುಗಳಿಗೆ ನೀರು ಮುಟ್ಟುತ್ತಿಲ್ಲ ಮುಂದಿನ ದಿನಗಳಲ್ಲಿ ಜಿ.ಎಲ್.ಬಿ.ಸಿ ಟೇಲ್ ಎಂಡ್ ರೈತರಿಗೆ ನೀರು ದೊರಕಿಸಿಕೊಡುವ ಎಲ್ಲ ಯತ್ನಗಳನ್ನು ಮಾಡುತ್ತೇನೆ. ಇದಕ್ಕಾಗಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿ ಟೇಲ್ ಎಂಡ್ ರೈತರ ಹಿತ ಕಾಪಾಡುವ ಕಾರ್ಯ ಮಾಡುವದಾಗಿ ಅವರು ಹೇಳಿದರು.

RELATED ARTICLES  ಕರಾವಳಿಯಲ್ಲಿ ರಾಹುಲ್ ಕಮಾಲ್.!

ತಮ್ಮ 60 ನೇ ವರ್ಷಕ್ಕೆ ರಾಜಕೀಯ ನಿವೃತ್ತಿಯಾಗುವದನ್ನು ಮತ್ತೊಮ್ಮೆ ಸ್ಪಷ್ಠಪಡಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಒಳ್ಳೇಯ ಕೆಲಸಗಳಿಂದ ಜನರ ಪ್ರೀತಿ ವಿಶ್ವಾಸಗಳಿಸಿದ್ದೇನೆ. ಕೆಟ್ಟ ಕೆಲಸ ಹಾಗೂ ದ್ವೇಷದ ರಾಜಕಾರಣ ತಮ್ಮ ಜೀವನದಲ್ಲಿ ಎಂದಿಗೂ ಮಾಡುವುದಿಲ್ಲಾ. ಕಳೆದ 13 ವರ್ಷಗಳಿಂದ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಶ್ರಮಿಸುತ್ತಿದ್ದೇನೆ. ನಾನು ಮಾಡಿರುವ ಹಲವಾರು ವಿಧಾಯಕ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು. ಪ್ರತಿಯೊಬ್ಬರ ಹೃದಯದಲ್ಲಿ ಇಂತಹ ಶಾಸಕರು ನಮಗೆ ಬೇಕು ಎಂದು ಹೇಳಬೇಕು, ಹೊರತು ಕೆಟ್ಟ ಕೆಲಸಗಳಿಂದ ಜನರಿಂದ ಬೈಯಿಸಿಕೊಳ್ಳುವ ಶಾಸಕ ನಾನಾಗಲಾರೆ. ರಾಜಕೀಯ ನಿವೃತ್ತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಜನರು ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ಸದಾ ಚಿರ ಋಣಿಯಾಗಿರುವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಖಾನಟ್ಟಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿಸುವಲ್ಲಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.

RELATED ARTICLES  ಮಗುವನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾವಳಗಿ ಸುಕ್ಷೇತ್ರದ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಸರಕಾರಿ ಪ್ರೌಢ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಸದಾಶಿವ ತುಪ್ಪದ ವಹಿಸಿದ್ದರು.
ಉಪನ್ಯಾಸಕರಾಗಿ ಹನುಮಾಕ್ಷಿ ಗೋಗಿ, ಮಮತಾ ಮೇಸ್ತ್ರಿ, ಲಕ್ಷ್ಮೀ ಅರಿಬೆಂಚಿ ಆಗಮಿಸಿದ್ದರು.

ಹಳ್ಳೂರ ಜಿ.ಪಂ ಸದಸ್ಯೆ ವಾಸಂತಿ ಹಣಮಂತ ತೇರದಾಳ, ತಾ.ಪಂ ಸದಸ್ಯ ಶಿವಬಸು ಜುಂಜರವಾಡ, ಗ್ರಾ.ಪಂ ಅಧ್ಯಕ್ಷೆ ರತ್ನವ್ವ ಮಾದರ, ಸೈದಾಪೂರದ ರಂಗನಗೌಡ ಪಾಟೀಲ, ಆನಂದ ನಾಯಿಕ, ಶಿಕ್ಷಣಾಧಿಕಾರಿಗಳಾದ ಎ.ಸಿ ಮನ್ನಿಕೇರಿ, ಎ.ಸಿ ಗಂಗಾಧರ, ಪ್ರಕಾಶ ಹಿರೇಮಠ, ಪ್ರಭಾ ಶುಗರ್ ನಿರ್ಧೇಶಕ ಮಲ್ಲಿಕಾರ್ಜುನ ಕಬ್ಬೂರ, ರೇವತಿ ಮಠದ, ಎಸ್.ಎಮ್ ಗುಗ್ಗರಿ, ಎಸ್.ಡಿ.ಎಮ್.ಸಿ ಸದಸ್ಯರು, ಬೆಳ್ಳಿ ಹಬ್ಬ ಆಚರಣೆಯ ಸ್ವಾಗತ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ನಿಮಿತ್ಯ ಹೊರತಂದ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಶಿವನಪ್ಪ ಗುದಗನ್ನವರ ಅವರು ಖಾನಟ್ಟಿ ಗ್ರಾಮಸ್ಥರ ಬೇಡಿಕೆಗಳ ಈಡೇರಿಕೆಗೆ ಮನವಿ ಅರ್ಪಿಸಿದರು.