ಬೆಂಗಳೂರು: ಸಮಾಜದಲ್ಲಿ ಯಾವುದೇ ರೀತಿಯ ಅಶಾಂತಿಯ ಪರಿಸ್ಥಿತಿ ಆಗದಂತೆ ನೋಡಿಕೊಳ್ಳುವುದು ರಾಜಕೀಯ ಮುಖಂಡರ ಕರ್ತವ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕವಾಗಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದ್ದು, ಸಂಸದರು ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದ ಅರಮನೆ ಆವರಣದಲ್ಲಿ ನಾಳೆ ಆಯೋಜಿಸಿರುವ ಜೆಡಿಎಸ್ ದಲಿತ ಬೃಹತ್ ಸಮಾವೇಶದ ಪೂರ್ವ ಸಿದ್ಧತೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಉತ್ತರ ಕನ್ನಡದಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಸಣ್ಣ ಪುಟ್ಟ ಘಟನೆಗಳನ್ನ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷದ ಕುತಂತ್ರಕ್ಕೆ ಕರಾವಳಿ ಜನ ಬಲಿಯಾಗಬಾರದು. ಶಾಲಾ ಮಕ್ಕಳನ್ನು ಬಿಜೆಪಿ ಮೆರವಣಿಗೆಗೆ ಕರೆತರುತ್ತಿರುವುದು ಖಂಡನೀಯ. ಯಾವ ಕಾರಣಕ್ಕೆ ಹೊನ್ನಾವರದಲ್ಲಿ ಯುವಕ ಸತ್ತನೋ ಗೊತ್ತಿಲ್ಲ. ಆದರೆ ಸಂಸದರೊಬ್ಬರು ಇದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಅನಂತ ಕುಮಾರ್ ಹೆಗಡೆ ಮೇಲೆ ವಾಗ್ದಾಳಿ ನಡೆಸಿದರು.
ಉತ್ತರ ಕನ್ನಡದಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ. ಪೊಲೀಸ್ ಅಧಿಕಾರಿಯೊಬ್ಬರ ವಾಹನಕ್ಕೇ ಬೆಂಕಿ ಹಚ್ಚಿದ್ದಾರೆ. ಮುಖ್ಯಮಂತ್ರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಟೀಕಿಸಿದರು.
ತುಮಕೂರಿನಲ್ಲಿ ಯಶಸ್ವಿಯಾಗಿ ಅಲ್ಪಸಂಖ್ಯಾತರ ಸಮಾವೇಶ ಮಾಡಿದ್ದೇವೆ. ನಾಳೆ ನಡೆಯುವ ಸಮಾವೇಶ ಕೂಡ ಯಶಸ್ವಿಯಾಗಲಿದೆ. ಚುನಾವಣೆಗೆ ಪಕ್ಷ ಬಲಪಡಿಸುವ ದೃಷ್ಟಿಯಿಂದ ಜನವರಿ 9ರಂದು ಮಂಗಳೂರಿನಲ್ಲಿ ಜೆಡಿಎಸ್ ನಡಿಗೆ ಸೌಹಾರ್ದತೆ ಕಡೆಗೆ ಹಮ್ಮಿಕೊಂಡಿದ್ದೇವೆ. ಈ ಹಿಂದೆ ಹೇಳಿದಂತೆ ನಮ್ಮ ಕುಟುಂಬದಿಂದ ಚುನಾವಣೆಗೆ ಇಬ್ಬರೇ ಸ್ಪರ್ಧೆ ಮಾಡಲಿದ್ದಾರೆ. ಡಿಕೆಶಿ ಜೊತೆ ಯಾವುದೇ ಒಪ್ಪಂದ ಆಗಿಲ್ಲ ನಾವು ಅಭ್ಯರ್ಥಿ ಹೆಸರು ಘೋಷಣೆ ಮಾಡಿದ ಬಳಿಕ ಇದು ಸ್ಪಷ್ಟವಾಗುತ್ತದೆ. ಯೋಗೇಶ್ವರ್ ಅವರ ರೀತಿ ಹೇಳಿಕೆ ರಾಜಕಾರಣ ಮಾಡುವುದಿಲ್ಲ ಎಂದು ಕಿಡಿಕಾರಿದರು.