ಹೊನ್ನಾವರ : ಪರೇಶ್ ಮೆಸ್ತಾ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಕರಾವಳಿ ನಗರ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ತಾಲೂಕಿನ ಮಾಗೋಡಿ ನಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ಕಿಡಿಗೇಡಿಗಳು ಚಾಕುವಿನಿಂದ ಹಲ್ಲೆ ನಡೆಸಿ, ಯುವತಿಯ ಕೈಯನ್ನು ಇರಿದಿದ್ದಾರೆ.
ಕೋಮು ಘರ್ಷಣೆ, ಪರೇಶ್ ಮೇಸ್ತಾ ಹತ್ಯೆ, ಹಿಂಸಾಚಾರದಿಂದ ತೀವ್ರ ಆತಂಕ ಮನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಶಾಂತಿ ಕದಡುವ ಯತ್ನ ಮುಂದುವರೆಸಿದ್ದಾರೆ. ಮಾಗೋಡು ಎಂಬಲ್ಲಿ ಶಾಲೆಗೆ ತೆರಳುತ್ತಿದ್ದ ಕಾವ್ಯ ಶೇಖರ್ ಎಂಬ ವಿದ್ಯಾರ್ಥಿನಿಗೆ ಕಿಡಿಗೇಡಿ ಯುವಕರು ಚಾಕುವಿನಿಂದ ಇರಿದು ಅಕೆಯನ್ನು ಹತ್ಯೆಗೈಯಲು ಯತ್ನಿಸಿದ್ದು, ಈ ವೇಳೆ ಆಕೆ ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ .
ಕಾವ್ಯಾಳ 2 ಕೈಗಳಿಗೆ ಚೂರಿ ಇರಿತದ ಗಾಯಗಳಾಗಿದ್ದು, ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮುಂಜಾಗೃತಾ ಕ್ರಮವಾಗಿ ಹೊನ್ನಾವರದಲ್ಲಿ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದ್ದು , ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿಯಾಗಿದೆ .
ಎಸ್ಪಿ ವಿನಾಯಕ್ ಪಾಟೀಲ್, ಜಿಲ್ಲಾಧಿಕಾರಿ ನಕುಲ್ ಆಸ್ಪತ್ರೆಗೆ ಭೇಟಿ ಕಾವ್ಯಾಳ ಬಳಿ ವಿವರ ಪಡೆದಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.