ಪೊಲೀಸರಿಗೆ ಮಾನವೀಯತೆ ಇಲ್ಲ. ಸುಖಾ ಸುಮ್ಮನೆ ಅವರು ತೊಂದರೆ ಕೊಡುತ್ತಾರೆ, ಅವರದ್ದು ಕಲ್ಲು ಹೃದಯ, ಯಾರ ಮಾತನ್ನೂ ಅವರು ಕೇಳಲ್ಲ. ಮಾನಸಿಕವಾಗಿ ಮತ್ತು ದೈಹಿಕವಾಗಿ ಚಿತ್ರಹಿಂಸೆ ಕೊಡ್ತಾರೆ. ಹೀಗೆ..! ಒಂದಾ, ಎರಡಾ, ನೂರೆಂಟು ಆರೋಪಗಳನ್ನು ನಾವು ನೀವು ಕೇಳೇ ಇರುತ್ತೀವಿ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮಾನವೀಯತೆ ಮೆರೆದು ರಿಯಲ್ ಹೀರೋ ಆಗಿದ್ದಾರೆ. ಅವರು ಮಾಡಿರುವ ಕೆಲಸವನ್ನು ನೀವು ನೋಡಿದ್ರೆ ಒಂದು ಕ್ಷಣ ನಿಮ್ಮ ಮನಸ್ಸು ಕರಗಿ ಹೋಗುತ್ತೆ. ಇಲಾಖೆಯಲ್ಲಿ ಇಂಥಾ ಹೃದಯವಂತ ಅಧಿಕಾರಿಗಳು ಇದ್ದಾರಲ್ಲ ಅಂತ ಮತ್ತಷ್ಟು ಗೌರವ ಹೆಚ್ಚಾಗುತ್ತೆ. ಅಷ್ಟಕ್ಕೂ ಏನಾಪ್ಪ ಅಂಥಾದ್ದು ಅಂತೀರಾ ಈ ವರದಿ ಓದಿ.
ಯಸ್..! ಈ ಕಂದಮ್ಮನನ್ನು ನೋಡುತ್ತಾ ಇದ್ರೆ, ಎಂಥವರಿಗೂ, ವಾವ್..! ಎಷ್ಟು ಮುದ್ದಾಗಿದೆ. ಯಾರು ಈ ಕಂದಮ್ಮನಿಗೆ ಜನ್ಮ ಕೊಟ್ಟವರು ಅಂತೀರಾ? ಆ ವಿಚಾರ ಹೇಳುವುದಕ್ಕೂ ಮುನ್ನ ಈ ಕಂದಮ್ಮನ ಪ್ರಾಣವನ್ನು ಉಳಿಸಿಕೊಟ್ಟ ಆ ಪುಣ್ಯಾತ್ಮನನ್ನ ಪರಿಚಯ ಮಾಡಿಕೊಡುತ್ತೇವೆ ನೋಡಿ.
ಇವರ ಹೆಸರು ಶಶಿಧರ್. ಸದ್ಯ ಬೆಂಗಳೂರಿನ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಇವರೂ ಕೂಡ ಒಬ್ಬರು. ಕೋಲಾರ, ತುಮಕೂರು, ಬೆಂಗಳೂರಿನ ಬಸವನಗುಡಿ, ಉಪ್ಪಾರಪೇಟೆ ಹೀಗೆ ಹಲವು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿದ್ದ ಅನುಭವ ಇವರಿಗಿದೆ. ಆದರೆ ಆಶೋಕನಗರ ಪೊಲೀಸ್ ಠಾಣೆಗೆ ಬರುವ ಮುನ್ನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅಲ್ಲೋಂದು ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ. ಆ ಕೆಲಸ ಬೇರೆ ಏನೂ ಅಲ್ಲ ಈ ಪುಟ್ಟ ಕಂದಮ್ಮನ ಜೀವವನ್ನು ಕಾಪಾಡಿದ್ದು.
ಹೌದು..! ಕಳೆದ 2 ತಿಂಗಳ ಹಿಂದೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕೆ.ಆರ್.ಪಾರ್ಕ್ ಬಳಿ ಕೇವಲ 18 ಗಂಟೆಯ ಹಿಂದೆ ಹುಟ್ಟಿದ್ದ ಹೆಣ್ಣು ಮಗುವನ್ನು ಗೋಣಿಚೀಲದಲ್ಲಿ ಮುಚ್ಚಿ ಕೆ.ಆರ್.ಪಾರ್ಕ್ ಬಳಿ ಇಟ್ಟು ಹೋಗಿದ್ದರು. ಈ ವಿಷಯವನ್ನು ಸ್ಥಳೀಯನೊಬ್ಬ ಇನ್ಸ್ ಪೆಕ್ಟರ್ ಶಶಿಧರ್ ಗೆ ಪೋನ್ ಮಾಡಿ, ಸರ್ ಯಾರೋ ಇಲ್ಲಿ ಮುಗು ಮಲಗಿಸಿ ಹೋಗಿದ್ದಾರೆ ಬೇಗ ಬನ್ನಿ ಸಾರ್ ಅಂತ ಹೇಳಿ ಪೋನ್ ಇಟ್ಟಿದ್ದ.
ವಿಷಯ ತಿಳಿದ ಶಶಿಧರ್ ತನ್ನ ಸಿಬ್ಬಂದಿ ಜೊತೆ ಕೆ.ಆರ್.ಪಾರ್ಕ್ ಬಳಿ ಬಂದಿದ್ದರು. ನೀವು ನಂಬಲ್ಲಾ ಅದ್ಯಾವ ಪುಣ್ಯತಿಗಿತ್ತಿನೋ ಏನೋ ಗೊತ್ತಿಲ್ಲ. ಕರುಳ ಬಳ್ಳಿಯನ್ನೂ ತುಂಡರಿಸದೆ ಹೆರಿಯಾದ ಆಗಿ ಕೇವಲ 18 ಗಂಟೆಯ ಮಗುವನ್ನು ಬಿಟ್ಟು ಹೋಗಿದ್ದಳು. ಈ ಸನ್ನಿವೇಶ ಕಂಡ ಶಶಿಧರ್, ತಕ್ಷಣ “ ಕ್ಲೌಡ್9” ಆಸ್ಪತ್ರೆಗೆ ದಾಖಲು ಮಾಡಿದ್ದರು. ವಿಚಿತ್ರ ಅಂದ್ರೆ ಆಸ್ಪತ್ರೆಯ ಸಿಬ್ಬಂದಿ ಅವತ್ತು ಶಶಿಧರ್ ಅವರಿಂದ ನೂರೆಂಟು ಪೇಪರ್ ಗೆ ಸಹಿ ಹಾಕಿಸಿಕೊಂಡಿದ್ದರು. ಮಗು ಜವಾಬ್ದಾರಿಯ ಸಂಪೂರ್ಣ ಹೊಣೆ ಹೊತ್ತಿದ್ದ ಶಶಿಧರ್, ತನ್ನ ಬಳಿ ಇದ್ದ 20 ಸಾವಿರ ಹಣ ಕೊಟ್ಟು ಮಗುವಿಗೆ ಚಿಕಿತ್ಸೆ ಕೊಡಿಸಿದ್ದರು.
ಸತತ 23 ದಿನ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಟ್ಟ ವೈದ್ಯರು ಸಾವಿನ ದವಡೆಯಿಂದ ಪಾರು ಮಾಡಿದ್ದರು. ಸದ್ಯ ಮಗು ಆರೋಗ್ಯವಾಗಿದ್ದು, ಸರ್ಕಾರಿ ಮಕ್ಕಳ ಶಿಶು ಆರೋಗ್ಯ ಕೇಂದ್ರದಲ್ಲಿ ಬೆಳೆಯುತ್ತಾ ಇದೆ.
ಮಗುವಿನ ಚಿಕಿತ್ಸೆಗೆ ಸಾಕಾಷ್ಟು ಮಂದಿ ಹಣದ ಸಹಾಯ ಮಾಡಿದ್ದಾರೆ. ಅವರಿಗೆಲ್ಲಾ ನನ್ನ ಕಡೆಯಿಂದ ಧನ್ಯವಾದ ಹೇಳಿರುವ ಶಶಿಧರ್ , “ ಒಂದು ವೇಳೆ ಮಗುವನ್ನು ದತ್ತು ಪಡೆಯಲು ಅವಕಾಶ ಸಿಕ್ಕರೆ ತಾನೇ ಪಡೆಯುತ್ತಿದ್ದೆ” ಆದರೆ ಕಾನೂನಿನಲ್ಲಿ ಸಾಕಾಷ್ಟು ನಿಯಮವಿದೆ ಎಂದು ಹೇಳಿರುವ ಶಶಿಧರ್ ಮಗುವಿಗೆ ಒಳ್ಳೇಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು
ಇನ್ನು ಮಗುವನ್ನು ಬಿಟ್ಟು ಹೋದ ತಂದೆ ತಾಯಿ ಯಾರೆಂದು ಗೊತ್ತಾಗಬೇಕಾಗಿದೆ. ಹಾಗಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಒಂದು ಕಂಪ್ಲೇಟ್ ದಾಖಲಾಗಿದೆ.
ಒಟ್ಟಾರೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 18 ದಿನ ಮಗುವನ್ನು ಕಾಪಾಡಿದ್ದ ಶಶಿಧರ್ ಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್.