ಶಿರಸಿ: ನಗರದಲ್ಲಿ ಮಂಗಳವಾರ ನಡೆದ ಹಿಂಸಾಚಾರದ ಭೀತಿಯಿಂದ ಜನರು ಹೊರಬಂದಿಲ್ಲ. ವಾಹನ ಸಂಚಾರ, ಜನಜೀವನ ಎಂದಿನಂತೆ ಮುಂದುವರಿದಿದ್ದರೂ ಜನರ ಮನದೊಳಗಿನ ದುಗುಡ ದೂರವಾಗಿಲ್ಲ.
ಬುಧವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಗರದಲ್ಲಿ ಮತ್ತೆ ಗಲಾಟೆ, ಕಲ್ಲು ತೂರಾಟ ಆರಂಭವಾಗಿದೆ ಎಂಬ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿತು. ಸಿ.ಪಿ. ಬಜಾರ, ನಟರಾಜ ರಸ್ತೆ, ಹೊಸಪೇಟೆ ರಸ್ತೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಕಾರರು ಸರಸರನೆ ಅಂಗಡಿ ಮುಚ್ಚಿ ಮನೆಯ ಕಡೆಗೆ ಹೆಜ್ಜೆ ಹಾಕಿದರು. ವಾಟ್ಪ್ ಆ್ಯಪ್ ಗ್ರೂಪ್‌ಗಳಲ್ಲೂ ಈ ಸುದ್ದಿ ಹರಿದಾಡಿತು. ಪೇಟೆ ಕೆಲಸಕ್ಕೆ ಬಂದವರು, ಕೂಲಿಕಾರರು, ಮಕ್ಕಳನ್ನು ಶಾಲೆಗೆ ಕಳುಹಿಸಿದ ಪಾಲಕರು ಆತಂಕಗೊಂಡರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿಕಾರರ ಮನವೊಲಿಸಿ ಪುನಃ ಅಂಗಡಿಯ ಬಾಗಿಲು ತೆರೆಯಿಸಿದರು.
ವಿಭಿನ್ನ ವಿಶ್ಲೇಷಣೆ: ಹಿಂದೆಂದೂ ಕಾಣದ ಹಿಂಸಾಚಾರವನ್ನು ದೃಶ್ಯ ಮಾಧ್ಯಮಗಳ ಮೂಲಕ ನೋಡಿರುವ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಘಟನೆಯ ಬಗ್ಗೆ ವಿವಿಧ ಬಗೆಯ ವಿಶ್ಲೇಷಣೆಗಳು ನಡೆಯುತ್ತಿವೆ.
‘ನಾವು, ಅಕ್ಕಪಕ್ಕದ ಮನೆಯಲ್ಲಿರುವ ಹಿಂದೂ–ಮುಸ್ಲಿಮರು ಸಹೋದರತ್ವದಿಂದ ಜೀವನ ನಡೆಸುತ್ತೇವೆ. ಶಾಂತಿಗೆ ಹೆಸರಾಗಿರುವ ಶಿರಸಿಯಲ್ಲಿ ಇಂತಹ ಕಾರಣಕ್ಕೆ ಸುದ್ದಿಯಾಗಬಾರದಿತ್ತು’ ಎಂದು ಸಾಮಾಜಿಕ ಮುಖಂಡ ರಾಜು ಉಗ್ರಾಣಕರ ಅಭಿಪ್ರಾಯಪಟ್ಟರು.
‘ಶಿರಸಿಯ ಜನರು ಶಾಂತಿ ಕಾಪಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯದ ಅನೇಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತ, ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಅಬ್ಬಾಸ್ ತೋನ್ಸೆ ಹೇಳಿದರು.