ಕಾರವಾರ: ‘ಕೆಲ ದುಷ್ಕರ್ಮಿಗಳು ಶಾಂತಿ– ಸುವ್ಯವಸ್ಥೆಯನ್ನು ಹಾಳು ಮಾಡುವ ದುರುದ್ದೇಶದಿಂದ ಸುಳ್ಳು ವದಂತಿಗಳನ್ನು ಹಾಗೂ ಸುದ್ದಿಗಳನ್ನು ಸೃಷ್ಟಿಸಿ, ಪ್ರಚೋದನಾಕಾರಿಯಾದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ತೀವ್ರ ನಿಗಾ ಇರಿಸಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಗುರುವಾರ ಬೆಳಿಗ್ಗೆ ಹೊನ್ನಾವರ ತಾಲ್ಲೂಕಿನ ಮಾಗೋಡ ಕೂಡ್ಲಗದ್ದೆ ಗ್ರಾಮದ ಬಾಲಕಿಯು ಶಾಲೆಗೆ ತೆರಳುತ್ತಿದ್ದ ವೇಳೆ ನಡೆದ ಘಟನೆಯ ಕುರಿತಂತೆ ಆಕೆಯ ಕೊಲೆಯಾಗಿರುವುದಾಗಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಜನರನ್ನು ಗಲಭೆಗೆ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಕೆ ಆರೋಗ್ಯವಾಗಿದ್ದು, ಮನೆಯಲ್ಲಿ ತನ್ನ ತಂದೆ– ತಾಯಿಯೊಂದಿಗೆ ಕ್ಷೇಮದಿಂದ ಇದ್ದಾಳೆ’ ಎಂದು ತಿಳಿಸಿದ್ದಾರೆ.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು.

‘ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್ ಇತ್ಯಾದಿಗಳಲ್ಲಿ ಬರುವ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಸಂದೇಶಗಳನ್ನು ನಂಬಬಾರದು. ಶಾಂತಿ– ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕು’ ಎಂದು ಅವರು ಕೋರಿದ್ದಾರೆ.

RELATED ARTICLES  ಬಸ್ ಸಂಚಾರ ಅವ್ಯವಸ್ಥೆ ಸರಿಪಡಿಸಲು ಎ.ಬಿ.ವಿ.ಪಿ ಆಗ್ರಹ

‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಸಂದೇಶಗಳನ್ನು ಪ್ರಸಾರ ಮಾಡುವ ಅಥವಾ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಸುಳ್ಳು ಸುದ್ದಿ ಹರಡಿ ಅದರಿಂದ ಯಾವುದೇ ಅನಾಹುತ ಸಂಭವಿಸಿದ್ದಲ್ಲಿ ಅದಕ್ಕೆ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಕೇವಲ ವದಂತಿಗಳ ಆಧಾರದ ಮೇಲೆ ಸಂದೇಶಗಳನ್ನು ಇತರರಿಗೆ ಹಂಚಿಕೊಳ್ಳುವುದು ಕೂಡ ಗಂಭೀರ ಅಪರಾಧವಾಗಿದ್ದು, ಶಿಕ್ಷಾರ್ಹವಾಗಿರುತ್ತದೆ’ ಎಂದು ತಿಳಿಸಿದ್ದಾರೆ.