ಕುಮಟಾ: ಗ್ರಾಮಸ್ಥರ ಅನುಕೂಲಕ್ಕಾಗಿ ಇಲ್ಲಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ಕಚೇರಿಯನ್ನು  ಹೊಲವಳ್ಳಿಗೆ ಸ್ಥಳಾಂತರಿಸುವಂತೆ ಕಳೆದ ಆರು ವರ್ಷಗಳಿಂದ ಹೋರಾಡುತ್ತಿರುವ ಗ್ರಾಪಂನ ಬಹುತೇಕ ಸದಸ್ಯರು ಜಿಲ್ಲಾಧಿಕಾರಿಯ ನಿರ್ಲಕ್ಷೃತನದಿಂದ ಬೇಸತ್ತು, ಗ್ರಾಪಂನ ಎಲ್ಲ ಚಟುವಟಿಕೆಗಳನ್ನು ಬಹಿಷ್ಕರಿಸುವ ನಿರ್ಣಯ ಕೈಗೊಂಡಿದ್ದಾರೆ.
ಸಂತೇಗುಳಿ ಗ್ರಾಮ ಪಂಚಾಯಿತಿಯನ್ನು 2009ರ ಮೇ ತಿಂಗಳಲ್ಲಿ ಇಬ್ಬಾಗಿಸಿ ಸೊಪ್ಪಿನಹೊಸಳ್ಳಿ ಎಂಬ ನೂತನ ಗ್ರಾಪಂನ್ನು ರಚಿಸಲಾಗಿತ್ತು. ಕಲವೆ ಹಾಗೂ ಸೊಪ್ಪಿನಹೊಸಳ್ಳಿ ಎಂಬ ಎರಡು ವಾರ್ಡ್‍ಗಳನ್ನು ಹೊಂದಿರುವ ಗ್ರಾಪಂನಲ್ಲಿ 3200 ಜನಸಂಖ್ಯೆ ಇದೆ. ಸೊಪ್ಪಿನಹೊಸಳ್ಳಿಯ ಪಿಡಬ್ಲುಡಿ ಕಟ್ಟಡದಲ್ಲಿ ಗ್ರಾಪಂನ ಕಾರ್ಯಾಲಯ ಇರುವುದರಿಂದ 2000 ಜನಸಂಖ್ಯೆ ಹೊಂದಿರುವ ಕಲವೆ ವಾರ್ಡ್‍ನ ಗ್ರಾಮಸ್ಥರು ಕಚೇರಿ ಕಾರ್ಯಗಳಿಗಾಗಿ 8 ಕಿಮೀ. ಕ್ರಮಿಸಬೇಕಾಗಿದ್ದರಿಂದ ತೊಂದರೆಯಾಗಿದೆ. ಎರಡು ವಾರ್ಡ್‍ಗಳ ಮಧ್ಯವರ್ತಿ ಸ್ಥಳವಾದ ಹೊಲವಳ್ಳಿಗೆ ಕಚೇರಿಯನ್ನು ಸ್ಥಳಾಂತರಿಸಬೇಕೆಂಬ ಒತ್ತಾಯ ಬಲವಾಗಿದೆ.
ಹಾಗಾಗಿ ಗ್ರಾಪಂ ಆಡಳಿತ ಸಮಿತಿಯು ಈ ಸಂಬಂಧ ಜಿಲ್ಲಾಧಿಕಾರಿ ಅವರೊಂದಿಗೆ ಕಳೆದ 6 ವರ್ಷಗಳಿಂದ ಪತ್ರ ವ್ಯವಹಾರ ನಡೆಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸರಗೊಂಡ ಬಹುತೇಕ ಸದಸ್ಯರು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಮೇ 2ರಂದು ಸಭೆ ಸೇರಿ, ಜುಲೈ ತಿಂಗಳ ಅಂತ್ಯದೊಳಗೆ ಗ್ರಾಪಂ ಕಾರ್ಯಾಲಯವನ್ನು ಸ್ಥಳಾಂತರಿಸದಿದ್ದಲ್ಲಿ ಆಗಸ್ಟ್ 1ರಿಂದ ಕಚೇರಿ ಕಾರ್ಯಗಳನ್ನು ಬಹಿಷ್ಕರಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ. ಇದರಿಂದ ಕಚೇರಿ ಕಾರ್ಯಗಳಿಗೆ ತೊಡಕಾಗಿ, ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ಕಚೇರಿಯನ್ನು ಹೊಲವಳ್ಳಿಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯರಾದ ಅಬ್ದುಲ ಖಾದರ್ ಸಾಬ್, ಈರು ಆಲು ಮರಾಠಿ, ಮಾದೇವಿ ಗಣಪತಿ ಮುಕ್ರಿ, ಯಂಕು ಕೃಷ್ಣ ಮರಾಠಿ ಹಾಗೂ ಸ್ಥಳೀಯ ಪ್ರಮುಖರಾದ ಗಜಾನನ ಭಟ್ ಇತರರ ಒತ್ತಾಯವಾಗಿದೆ.
ಮನವಿ ಸಲ್ಲಿಸಿ ಸುಸ್ತಾದ ಆಡಳಿತ ಸಮಿತಿ
ಸೊಪ್ಪಿನಹೊಸಳ್ಳಿ ಗ್ರಾಪಂ ಕಚೇರಿಯನ್ನು ಹೊಲವಳ್ಳಿಗೆ ಸ್ಥಳಾಂತರಿಸುವಂತೆ ಆಡಳಿತ ಸಮಿತಿಯು ತಾಪಂ ಇಒ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಯಿಂದ ಹಿಡಿದು ರಾಜ್ಯ ಸರ್ಕಾರದ ಕಾರ್ಯದರ್ಶಿಗಳ ವರೆಗೆ ಮನವಿ ಸಲ್ಲಿಸಿ, ವಿನಂತಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರು ಮೂರು ಪ್ರತ್ಯೇಕ ವರದಿಯನ್ನು ಉಪವಿಭಾಗಾಧಿಕಾರಿಗಳ ಮೂಲಕ ಪರಿಶೀಲಿಸಿ ಪಡೆದಿದ್ದಾರೆಯೇ ಹೊರತು ಯಾವುದೆ ಕ್ರಮವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಪದೇ ಪದೇ ಮನವಿ ಸಲ್ಲಿಸಿ ಸುಸ್ತಾದ ಆಡಳಿತ ಸಮಿತಿ ಪ್ರತಿಭಟನೆಯನ್ನು ತೀವ್ರಗೊಳಿಸುವ ನಿರ್ಣಯ ಕೈಗೊಂಡಿದ್ದಾರೆ.
ಹೊಸ ಕಟ್ಟಡ ನಿರ್ಮಾಣಕ್ಕು ಅಡ್ಡಿ
ಸೊಪ್ಪಿನಹೊಸಳ್ಳಿ ಗ್ರಾಪಂ ರಚೆನೆಯಾದ ಬಳಿಕ ಪಿಡಬ್ಲುಡಿ ಕಟ್ಟಡದಲ್ಲಿ ಕಚೇರಿಯನ್ನು ತೆರೆಯಲಾಗಿದೆ. ಗ್ರಾಪಂಗೆ ಸ್ವತಂ ಕಟ್ಟಡವಿರಬೇಕೆಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಇಲಾಖೆ 15 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ ಕಚೇರಿ ಸ್ಥಳಾಂತರದ ವಿವಾದದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕು ಅಡ್ಡಿ ಉಂಟಾಗಿದೆ.
ಸೊಪ್ಪಿನಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಹುಲಿಯಪ್ಪ ಗೌಡ, ಆಡಳಿತ ಸಮಿತಿಯ ಸಮ್ಮತಿ ಮೇರೆಗೆ ಗ್ರಾಪಂ ಕಚೇರಿಯನ್ನು ಸ್ಥಳಾಂತರಿಸುವ ಅಧಿಕಾರ ಜಿಲ್ಲಾಧಿಕಾರಿ ಅವರಿಗೆ ಇದೆ. ಆ ಕಾನೂನಿನಡಿಯಲ್ಲೇ ಹಲವು ಬಾರಿ ಮನವಿ ಮಾಡಿದ್ದೇವೆ. ಜನರ ಅನುಕೂಲಕ್ಕಾಗಿ ಗ್ರಾಪಂ ಕಚೇರಿಯನ್ನು ಹೊಲವಳ್ಳಿಗೆ ಸ್ಥಳಾಂತರಿಸ ಬೇಕು ಎಂದು ತಿಳಿಸಿದ್ದಾರೆ.
RELATED ARTICLES  ಸಂಪನ್ನವಾಯ್ತು ಹಾಲಕ್ಕಿ ಒಕ್ಕಿಗರ ಸಭಾಭವನದ ಶಿಲಾನ್ಯಾಸ ಮತ್ತು ಗುರುವಂದನಾ ಕಾರ್ಯಕ್ರಮ.