ಎಐಸಿಸಿ ಅಧ್ಯಕ್ಷ ಗಾದಿಗೆ ಅವಿರೋಧವಾಗಿ ಆಯ್ಕೆಯಾದ ರಾಹುಲ್ ಗಾಂಧಿ ಇಂದು ಪಕ್ಷದ ಸಾರಥ್ಯವನ್ನು ಅಧಿಕೃತವಾಗಿ ವಹಿಸಿಕೊಂಡರು. 19 ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರಾಗಿ ಸ್ಥಾನ ಅಲಂಕರಿಸಿದ್ದ ಸೋನಿಯಾ ಮಗನಿಗೆ ಸ್ಥಾನ ಬಿಟ್ಟುಕೊಟ್ಟು ಹುದ್ದೆಯಿಂದ ನಿರ್ಗಮಿಸಿದರು.
ದೆಹಲಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಅಧ್ಯಕ್ಷರಾಗಿ ಮೊದಲ ಭಾಷಣ ಮಾಡಿದ ಅವರು ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 21ನೇ ಶತಮಾನದಲ್ಲಿರುವ ಭಾರತವನ್ನು ಮೋದಿ ಮಧ್ಯಕಾಲೀನ ಯುಗಕ್ಕೆ ದೂಡುತ್ತಿದ್ದಾರೆ. ಕೋಮುವಾದ =ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ ರಾಜಕೀಯ ಜ್ಞಾನವಿಲ್ಲದೆ 20 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಲು ಹೊರಟಾಗ ನಾನು ಸಂಪೂರ್ಣ ಭಯಪಟ್ಟಿದೆ. ನನ್ನ ಕೈಗಳು ಅದುರುತ್ತಿದ್ದವು. ಆದರೆ ರಾಹುಲ್, ದೃಢ ವ್ಯಕ್ತಿ. ನಾನು ನನ್ನ ಮಗನನ್ನು ಹೊಗಳಲು ಇದು ಸರಿಯಾದ ಸಮಯವಲ್ಲ. ಆದರೆ, ರಾಜಕೀಯ ಟೀಕೆಗಳಿಂದಾಗಿ ಆತ ಹೆಚ್ಚು ಸಮರ್ಥನಾಗಿದ್ದು, ನಿರ್ಭೀತ ವ್ಯಕ್ತಿಯಾಗಿ ರೂಪುಗೊಂಡಿದ್ದಾನೆ ಎಂದು ಪ್ರಶಂಸಿದರು.
ಗಾಂಧಿ ಕುಟುಂಬದ ಐದನೇ ತಲೆಮಾರಿನ ವ್ಯಕ್ತಿಯಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಅಲಂಕರಿಸಿದರು.