ಶಿರಸಿ : ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಕೋರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ತಿಳಿಸಿದರು.
ಇಲ್ಲಿನ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಜಿಲ್ಲೆಯಲ್ಲಿನ ಘಟನೆಗಳನ್ನು ಗಮನಿಸಿದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ನಿಷ್ಪಕ್ಷವಾಗಿ ಮಾಡುತ್ತಾರೆ ಎಂಬ ನಂಬಿಕೆ ನಮಗೆ ಹಾಗೂ ಸಾರ್ವಜನಿಕರಿಗೆ ಇಲ್ಲವಾಗಿದೆ. ಇವರು ಸರ್ಕಾರ ಹೇಳಿದಂತೆ ನಡೆಯುತ್ತಾರೆ ಎಂದು ಕಾಣುತ್ತಿದೆ. ಆದ್ದರಿಂದ ಇವರನ್ನು ವರ್ಗಾವಣೆ ಮಾಡಬೇಕು ಎಂದು ಕೋರಿ ಸದ್ಯದಲ್ಲಿಯೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದರು.
ಡಿ.6 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಿಲ್ಲೆಗೆ ಬಂದು ಹೋದ ನಂತರದಲ್ಲಿ ಮುಸ್ಲಿಂ ಜಿಹಾದಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಪರೋಕ್ಷವಾಗಿ ಮಾಡಿದ್ದಾರೆ . ಈ ಹಿಂದೆ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಿದ್ದಾಗ ಜಿಲ್ಲೆಗೆ ಬಂದು ಹೋದ ಮೇಲೆ ಭಟ್ಕಳ ಗಲಭೆ ನಡೆಯಲು ಅವಕಾಶವಾಯಿತು. ಈಗ ಸಿದ್ಧರಾಮಯ್ಯನವರು ಬಂದು ಹೋದ ಮೇಲೆ ಗಲಭೆಗಳು ನಡೆಯುತ್ತದೆ. ಕಾಂಗ್ರೆಸ್ ಆಡಳಿತವನ್ನು ಗಮನಿಸಿದಲ್ಲಿ ಮೊಘಲರ, ಜಿಹಾದಿಗಳ, ಬ್ರಿಟಿಷರ ಆಳ್ವಿಕೆ ನೆನಪಿಗೆ ಬರುತ್ತದೆ. ಅಲ್ಲಿ ಸಿಗುತ್ತಿದ್ದ ಶಿಕ್ಷೆ, ದಬ್ಬಾಳಿಕೆ ಇಂದು ರಾಜ್ಯದಲ್ಲಿ ಸಿಗುತ್ತಿದೆ ಎಂದರು. ಅಲ್ಲದೇ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಮಾಯಕರ ಮೇಲೆ ಕೇಸ್ ಹಾಕಾಲಗಿದೆ . ಅದನ್ನು ಹಿಂಪಡೆದು ಸರಿಯಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಹೆಗಡೆ ಮಾತನಾಡಿ ” ಪೊಲೀಸರು ಕೆಲವು ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಂತವರ ತಾಯಂದಿರ ಜೊತೆಯಲ್ಲಿ ಪ್ರತಿ ಮಂಡಲದಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಗೆ ಸಂಬಂಧವಿಲ್ಲದವರ ದ್ವಿಚಕ್ರ ವಾಹನಗಳನ್ನೂ ಸಹ ತೆಗೆದುಕೊಂಡು ಹೋಗಿ ಗುಜುರಿಗೆ ಹಾಕುವ ಸ್ಥಿತಿ ತಂದಿದ್ದಾರೆ. ಇದೆಲ್ಲರ ವಿರುದ್ಧ ಮಹಿಳಾ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ” ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಡಿ.ಹೆಗಡೆ, ಶೋಭಾ ನಾಯ್ಕ, ಉಷಾ ಹೆಗಡೆ ಇದ್ದರು.