ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಶಿರಸಿ ಘಟಕದ ವತಿಯಿಂದ ರಾಜ್ಯ ಗೃಹ ಸಚಿವ ರಾಮಲಿಂಗರೆಡ್ಡಿಯವರಿಗೆ ಸಹಾಯಕ ಆಯುಕ್ತ ರಾಜು ಮೊಗವೀರ ಮೂಲಕ ಶನಿವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಸರಕಾರವು ಈ ಪ್ರಕರಣದ ಬಗ್ಗೆ ನಿರ್ಲಕ್ಷ ತೋರದೆ ಪರೇಶ ಮೇಸ್ತಾ ಸಾವಿನ ಘಟನೆ ನೆಡೆದ ತಕ್ಷಣ ಈ ಪ್ರಕರಣವನ್ನು ಸೂಕ್ತ ತನಿಖಾ ಸಂಸ್ಥೆಗೆ ವಹಿಸಿಕೊಟ್ಟಿದ್ದಲ್ಲಿ ಸಂಬಾವ್ಯ ಗಲಾಟೆಯನ್ನು ತಪ್ಪಿಸಬಹುದಾಗಿದ್ದು ರಾಜ್ಯ ಸರ್ಕಾರದ ವಿಳಂಬ ದೋರಣೆಯಿಂದಾಗಿ ಈ ಘಟನೆ ನೆಡೆದಿರುತ್ತದೆ.
ಭವಿಷ್ಯದಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರವು ಸಕಾಲದಲ್ಲಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಈ ಮೂಲಕ ಜೆ.ಡಿ.ಎಸ್ ಆಗ್ರಹಿಸುತ್ತದೆ. ಇನ್ನು ಮುಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ನೆಡೆದಂತಹ ಅಹಿತಕಾರಿ ಘಟನೆಗಳು ಪುನಹ ಮರುಕಳಿಸದಂತೆ, ಸಾರ್ವಜನಿಕರು ಈ ಹಿಂದಿನಂತೆ ನೆಮ್ಮದಿಯಿಂದ ಬಾಳ್ವೆ ಮಾಡಿಕೊಂಡು ಬರಲು ಅಗತ್ಯ ಕ್ರಮ ಕೈಗೊಂಡು, ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಜರುಗಿಸಿ, ಸಾರ್ವಜನಿಕರ ಜೀವಕ್ಕೆ ಆಸ್ತಿ ಪಾಸ್ತಿಗೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಉಲ್ಲೇಖಿಸಿ ಮನವಿ ನೀಡಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ” ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ ಆ ಸಾವಿಗೆ ಕೋಮು ಬಣ್ಣವನ್ನು ನೀಡಿ ಅಮಾಯಕರ ಮೇಲೆ ಆಗುತ್ತಿರುವ ಆಕ್ರಮಣವನ್ನು ಮಾತ್ರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ತಪ್ಪು ಮಾಡದ ಜನಸಾಮಾನ್ಯರಿಗೆ ನೋವು ನೀಡಿರುವುದು ತಪ್ಪು. ಇದು ರಾಜ್ಯ ಸರ್ಕಾರದ ವೈಫಲ್ಯದಿಂದ ಆಗಿದೆ. ಇಲ್ಲಿ ಸರ್ಕಾರ ಗಲಭೆ ನಡೆಯುತ್ತಿದ್ದರೂ ಶಾಂತಿ ಸಭೆ ಮಾಡಲಿಲ್ಲ. ಅಲ್ಲದೇ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳೂ ಮಾಡಿಲ್ಲ. ದುರದೃಷ್ಟಕರವೆಂದರೆ ಇಲ್ಲಿ ಕುಮ್ಮಕ್ಕು ನೀಡುವ ಕೆಲಸ ಆಯಿತು. ಆದರೆ ಇನ್ನು ಮುಂದಾದರೂ ಸರಿಯಾದ ರೀತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಆಗಬೇಕಿದೆ ” ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚೈತ್ರಾ ಗೌಡ,ಬಿ.ಆರ್.ನಾಯ್ಕ, ಆರ್.ಜಿ.ನಾಯ್ಕ, ರಾಘವೇಂದ್ರ ಭಟ್, ನರಸಿಂಹ ಜೋಶಿ, ನರಸಿಂಹ ಅಬ್ರಿ, ಸಚಿನ್ ಶೆಟ್ಟಿ ಮುಂತಾದವರು ಇದ್ದರು.