ಕಾರವಾರ : ಅಮಾಯಕ ಹಿಂದೂ ಯುವಕರ ಬಂಧನ ಮುಂದುವರಿಸಿದರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಿರ್ಧಿಷ್ಟಾವಧಿ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಹಿಂದೂ ಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಹಿಂದೂ ಪರ ಸಂಘಟನೆಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯವಾದಿ ಹಾಗೂ ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್ ಪೈ ಅಮಾಯಕ ಹಿಂದೂ ಯುವಕರನ್ನು ಪೊಲೀಸರು ವಿನಾಃಕಾರಣ ಬಂಧಿಸುತ್ತಿದ್ದಾರೆ. ಇದರಿಂದ ನೊಂದ ಜಿಲ್ಲೆಯ ಜನ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.
ಪೊಲೀಸರು ಶಿರಸಿ ಮತ್ತು ಕುಮಟಾದಲ್ಲಿ ಬಂದ್ ವೇಳೆ ಇನ್ನೊಂದು ಕೋಮಿನ ವ್ಯಕ್ತಿಗಳ ಜೊತೆ ಸೇರಿಕೊಂಡು ಸಾರ್ವಜನಿಕ ಆಸ್ತಿಯನ್ನು ನಾಶಮಾಡುತ್ತಿರುವ ವಿಡಿಯೋ ಇದ್ದರೂ ಅವರನ್ನು ಬಂಧಿಸದೆ ಪಕ್ಷಪಾತಿಯಂತೆ ವರ್ತಿಸುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಧುರೀಣರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಅಮಾಯಕ ಹಿಂದೂ ಯುವಕರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಯುವಕರ ತಂದೆ ತಾಯಿ ಗಳನ್ನು ಸಹ ಪೊಲೀಸರು ಬೆದರಿಸುತ್ತಿದ್ದಾರೆ. ಇದನ್ನು ಕೊನೆಗೊಳಿಸದೆ ಇದ್ದರೆ ಜಿಲ್ಲೆಯಲ್ಲಿ ಅನಿರ್ಧಿಷ್ಟಾವಧಿ ಬಂದ್‌ಗೆ ಕರೆ ನೀಡಬೇಕಾದಿತು ಹಾಗೂ ಮುಂದೆ ನಡೆಯುವ ಎಲ್ಲಾ ಘಟನೆಗಳಿಗೆ ಪೊಲೀಸರೆ ಹೊಣೆ ಹೊರಬೇಕಾದಿತೆಂದು ಎಚ್ಚರಿಸಿದರು.
ತುರ್ತುಕ್ರಮ ಕೈಗೊಳ್ಳುವ ಮೂಲಕ ಈ ಅಹಿತಕರ ಘಟನೆಗಳನ್ನು ನಿಲ್ಲಿಸುವಲ್ಲಿ ಪೊಲೀಸ್ ಇಲಾಖೆಯು ಎಡವಿದೆ ಎಂದ ಅವರು, ಅಮಾಯಕರ ವಿರುದ್ಧ ದೌರ್ಜನ್ಯವೆಸಗಿರುವ ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗ ಹಾಗೂ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೈ ಎಚ್ಚರಿಸಿದರು.
ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಜಿ.ಮೋಹನ್ ಮತ್ತಿತರರು ಇದ್ದರು.