ಬೆಂಗಳೂರು: ಸಾಮಾಜಿಕ ಜಾಲತಾಣಗಳಾದ ಫೇಸ್’ಬುಕ್ ಹಾಗೂ ಟ್ವಿಟರ್ ಬಳಕೆಗಳು ಜನರ ದಿನನಿತ್ಯ ಜೀವನದಲ್ಲಿ ಭಾಗವಾಗಿ ಹೋಗಿದೆ. ಇದರಂತೆ ಜನರಿಗೆ ಹತ್ತಿರುವಾಗುವ ಸಲುವಾಗಿ ನಗರ ಪೊಲೀಸರು 2014ರ ಆಗಸ್ಟ್ 14 ರಂದು ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿದ್ದರು. ಇದೀಗ ಈ ಖಾತೆಯ ಫಾಲೋವರ್ಸ್ ಗಳ ಸಂಖ್ಯೆ 10 ಲಕ್ಷ ಗಡಿ ದಾಟಿದೆ. ಈ ಮೂಲಕ ದೇಶದಲ್ಲಿಯೇ ಅತೀ ಹೆಚ್ಚು ಮೆಚ್ಚುಗೆ ಪಡೆದಿರುವ ಪೊಲೀಸರ ಟ್ವಿಟರ್ ಖಾತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದಲ್ಲಿಯೇ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಅಧಿಕೃತ ಪೊಲೀಸ್ ಟ್ವಿಟರ್ ಖಾತೆಗಳ ಪೈಕಿ 4.9 ಲಕ್ಷ ದಶಲಕ್ಷ ಫಾಲೋವರ್ಸ್ ಇರುವ ಮುಂಬೈ ನಂತರದ ಸ್ಥಾನ ಇದೀಗ ಬೆಂಗಳೂರು ನಗರ ಪೊಲೀಸರಿಗೆ ದೊರಕಿದೆ.
2012ರಲ್ಲಿ ಫೇಸ್ ಬುಕ್ ಜೊತೆಯಲ್ಲೇ ಬೆಂಗಳೂರು ಪೊಲೀಸರು ಟ್ವಿಟರ್ ಖಾತೆಯನ್ನು ತೆರೆದಿದ್ದರು. ಆದರೆ, 2015ರಲ್ಲಿ ಅಂದಿನ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ರೆಡ್ಡಿ, ಪೊಲೀಸ್ ಆಯುಕ್ತ ಹಾಗೂ ಬೆಂಗಳೂರು ಪೊಲೀಸ್ ಹೆಸರಿನಲ್ಲಿ ಟ್ವಿಟರ್ ಖಾತೆ ಆರಂಭಿಸಿ ಅತೀ ಹೆಚ್ಚು ಜನಪ್ರಿಯಗೊಳಿಸಿದರು. ಕೆಲವೇ ದಿನಗಳಲ್ಲಿ ಭಾರೀ ಜನಪ್ರಿಯಗೊಂಡ ಟ್ವಿಟರ್ ಖಾತೆಯ ಮೂಲಕ ಪೊಲೀಸರು ಸಾರ್ವಜನಿಕರೊಂದಿಗೆ ನೇರ ಸಂವಹನ ಆರಂಭಿಸಿದರು. ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕವಾಗಿ ಸೋಷಿಯನ್ ಮೀಡಿಯಾ ಮಾನಿಟರಿಂಗ್ ಸಿಸ್ಟಂ ಅನ್ನೇ ಆರಂಭಿಸಲಾಯಿತು.
ಕಳೆದ ಕೆಲ ವರ್ಷಗಳಿಂದಲೂ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಅಂತರವನ್ನು ದೂರಾಗಿಸಲು ಸಾಕಷ್ಟು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ.
ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆಂದೇ ಕಮಾಂಡ್ ಕೇಂದ್ರದ ಡಿಸಿಪಿ ಅಧೀನದಲ್ಲಿ ಪ್ರತ್ಯೇಕ ವಿಭಾಗವೊಂದು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. 20ಕ್ಕೂ ಹೆಚ್ಚು ಸಿಬ್ಬಂದಿ 3 ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಾಗ ಮಾಹಿತಿಗಳನ್ನು ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುತ್ತಿದ್ದಾರೆ.