ಶಿರಸಿ : ಮುಂಬರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ನಗರಸಭೆ ವತಿಯಿಂದ ಕೋರಿಕೆ ಸಲ್ಲಿಸಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ತಿಳಿಸಿದರು. ಶಿರಸಿಯ ಅಟಲಜೀ ಸಭಾಭವನದಲ್ಲಿ ಮಂಗಳವರ ನಡೆದ ವಿಶೇಷ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.7ರಂದು ಶಿರಸಿಗೆ ಬಂದಾಗ ಮಾರಿಕಾಂಬಾ ಜಾತ್ರೆಗೆ ಕಳೆದ ಬಾರಿಯೂ ವಿಶೇಷ ಅನುದಾನ ನೀಡಿದ್ದೇನೆ. ಪ್ರಸಕ್ತ ಸಾಲಿನ ಜಾತ್ರೆಗೂ ಇನ್ನು ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ನಗರಸಭೆಯಿಂದ ಪ್ರಸ್ತಾವನೆ ಸಲ್ಲಿಸಿ ಜಾತ್ರೆಗೂ ಮುನ್ನ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಪಟ್ಟಿ ಮಾಡಿ ಆದ್ಯತೆಯ ಮೇರೆಗೆ ಕೆಲಸ ಮಾಡಲಾಗುವುದು ಎಂದರು.
ನಗರಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ನಂದಾ ನಾಯ್ಕ ಮಾತನಾಡಿ, ನಿಲೇಕಣಿ ಸರ್ಕಾರಿ ಪಿಯು ಕಾಲೇಜು ಅಪಾದಂಚಿನಲ್ಲಿದೆ. ಪಕ್ಕದಲ್ಲೇ ಇರುವ ನೀರು ಶುದ್ದಿಕರಣ ಘಟಕದ ಪಂಪಿನ ವೈಬ್ರೇಶನ್‍ನಿಂದಾಗಿ ಕಾಲೇಜು ಕಟ್ಟಡದ ಗೋಡೆ ಬಿರುಕು ಬಿಟ್ಟಿವೆ. ಅಲ್ಲದೇ ಕಟ್ಟಡದ ಆವರಣದ ಗುಡ್ಡ ಸಹ ಕುಸಿಯುತ್ತಿದ್ದು, ಕೂಡಲೇ ನಗರಸಭೆಯ ಈ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರದೀಪ ಶೆಟ್ಟಿ ಪ್ರತಿಕ್ರೀಯಿಸಿ, ಬುಧವಾರ ನಗರಸಭೆಯ ಇಂಜನೀಯರ್ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾಗಿದ್ದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಅನುದಾನದಲ್ಲಿ ಬೇರೆ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಅಧ್ಯಕ್ಷರು ಪ್ರಸ್ತಾಪಿಸುತ್ತಿದ್ದಂತೆ ಕೆಲವರು ನಗರದ ಸುಭಾಷಚಂದ್ರ ಬೋಸ್ ವಾಣಿಜ್ಯ ಸಂಕೀರ್ಣ ಮೇಲ್ದರ್ಜೆಗೇರಿಸುವುದು ಸೂಕ್ತ ಎಂದರೇ, ಇನ್ನು ಕೆಲವರು ಹೊಸದಾದ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಸೂಕ್ತ ಎಂದರು. ಇದೇ ವೇಳೆ ಮಾಜಿ ಅಧ್ಯಕ್ಷ ರಮೇಶ ಆಚಾರಿ ಮಾತನಾಡಿ, ನಗರದಲ್ಲಿ ಶುಭಾಶಯ ಕೋರುವ ಬ್ಯಾನರ್ ಮತ್ತು ಬಂಟಿಂಗ್ಸ್ ತಿಂಗಳಾದರೂ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಬಂದು ಹೋಗಿ ಎರಡು ವಾರ ಕಳೆದರು ಇನ್ನು ತೆಗೆಸಿಲ್ಲ. ಆದಷ್ಟು ಬೇಗ ನೋಟಿಸ್ ನೀಡಿ ತೆಗೆಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಉಪಾಧ್ಯಕ್ಷೆ ಅರುಣಾ ವೆರ್ಣೇಕರ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಕೇಶ ತಿರುಮಲೆ, ಪೌರಾಯುಕ್ತ ಮಹೇಂದ್ರಕುಮಾರ ಉಪಸ್ಥಿತರಿದ್ದರು.