ಕಾರವಾರ: ಇಲ್ಲಿನ ಅರಣ್ಯ ವಿಭಾಗದ ವತಿಯಿಂದ ಅಂಕೋಲಾದಲ್ಲಿ ಚಿಣ್ಣರ ವನ ದರ್ಶನ ಎಂಬ ಎರಡು ದಿನದ ಕಾರ್ಯಗಾರ ನಡೆಸಲಾಯಿತು.
ಹಟ್ಟಿಕೇರಿ ಮರಮುಟ್ಟು ಸಂಗ್ರಹಾಲಯಕ್ಕೆ ಭೇಟಿ ನೀಡಿ ವಿವಿಧ ಬಗೆಯ ನಾಟಾ, ಜಲಾವು, ಹರಾಜು ಪ್ರಕ್ರಿಯೆ, ವಿಂಗಡಣೆ, ರಹದಾರಿ ಪರವಾನಿಗೆ ಕುರಿತು ಮಕ್ಕಳಿಗೆ ಮಾಹಿತಿ ಒದಗಿಸಲಾಯಿತು. ಅರಣ್ಯ ಇಲಾಖೆಯ ಕಾರ್ಯವೈಖರಿ, ಅರಣ್ಯ ಕಾನೂನು, ಪರಿಸರದ ಸಮತೋಲನಕ್ಕೆ ಅರಣ್ಯ ಹಾಗೂ ವನ್ಯ ಜೀವಿಗಳ ಮಹತ್ವದ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ ಮಾಹಿತಿ ನೀಡಿದರು.
ಹಾರವಾಡಾದ ಸಸ್ಯ ಪಾಲನಾ ಕ್ಷೇತ್ರಕ್ಕೆ ಭೇಟಿ ನೀಡಿ ಸಸ್ಯ ಪಾಲನೆ ಕುರಿತು ತಿಳುವಳಿಕೆ ನೀಡಲಾಯಿತು. ಮರುದಿನ ದಾಂಡೇಲಿಯ ಅಣಶಿ ಪ್ರಕೃತಿ ಶಿಬಿರಕ್ಕೆ ಕರೆದೊಯ್ದು ವಿಷಕಾರಿ ಹಾಗೂ ವಿಷ ರಹಿತ ಸರಿಸೃಪಗಳ ಕುರಿತು ಸಂಪನ್ಮೂಲ ವ್ಯಕ್ತಿ ವಿರೇಂದ್ರ ಪವಾರ್ ಉಪನ್ಯಾಸ ನೀಡಿದರು. ಪ್ರಥಮ ಚಿಕಿತ್ಸೆ ಪ್ರಮುಖ ನಾಲ್ಕು ಬಗೆಯ ಅತ್ಯಂತ ವಿಷಕಾರಿ ಸರಿಸೃಪಗಳನ್ನು ಗುರುತಿಸುವ ವಿಧಾನಗಳ ಬಗ್ಗಯೂ ತಿಳಿಸಲಾಯಿತು.
ಅರಣ್ಯ ರಕ್ಷಕ ಗೋಪಾಲ ನಾಯ್ಕರಿಂದ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಪಕ್ಷಿಗಳ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.