ಕಾರವಾರ: ಚತುಷ್ಪಥ ಕಾಮಗಾರಿಗಾಗಿ ಕಡಲತೀರದಲ್ಲಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯ ಸ್ವಲ್ಪ ಭಾಗ ತೆರವುಗೊಳ್ಳಲಿದ್ದು, ಈ ಮಾರುಕಟ್ಟೆಯ ಎದುರು ಭಾಗದಲ್ಲಿನ ಖಾಲಿ ಜಾಗದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ನಗರಸಭೆಯು ಯೋಜನೆ ರೂಪಿಸಿದೆ.

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಚತುಷ್ಪಥ ಕಾಮಗಾರಿ ಭರದಿಂದ ಸಾಗಿದೆ. ಲಂಡನ್‌ ಸೇತುವೆಯಿಂದ ಆರ್‌ಟಿಒ ಕಚೇರಿವರೆಗೆ ಮೇಲ್ಸೇತುವೆ (ಫ್ಲೈ ಓವರ್‌) ನಿರ್ಮಾಣವಾಗಲಿದ್ದು, ಇದಕ್ಕೂ ಪೂರ್ವದಲ್ಲಿ ಸರ್ವೀಸ್‌ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಹೆದ್ದಾರಿಯಂಚಿನ ತಾತ್ಕಾಲಿಕ ಮಾರುಕಟ್ಟೆಯ ಸುಮಾರು 7 ಮೀಟರ್‌ನಷ್ಟು ಜಾಗ ತೆರವುಗೊಳ್ಳಲಿದೆ. ಇದರಿಂದ ಮೀನು ಮಾರಾಟ ಮಹಿಳೆಯರಿಗೆ ಮತ್ತೆ ಅನಾನುಕೂಲ ಆಗಲಿದೆ.

‘ಚತುಷ್ಪಥಕ್ಕೆ ಕಾಮಗಾರಿಗೆ ಮಾರುಕಟ್ಟೆಯ ಸಂಪೂರ್ಣ ಭಾಗ ತೆರವುಗೊಳ್ಳುವುದಿಲ್ಲ. ಕಾಮಗಾರಿಗೆ ಎಷ್ಟು ಭಾಗ ತೆರವು ಆಗಲಿದೆಯೋ ಅಷ್ಟು ಭಾಗವನ್ನು ಮಾರುಕಟ್ಟೆಯ ಎದುರಿನ ಜಾಗದಲ್ಲಿ ಹೊಸದಾಗಿ ನಿರ್ಮಾಣ ಮಾಡಿಕೊಡಲಾಗುವುದು. ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯವರು ಇದಕ್ಕೆ ಸ್ವಲ್ಪ ಹಣ ನೀಡಲಿದೆ. ಉಳಿದದನ್ನು ನಗರಸಭೆ ಭರಿಸಲಿದೆ’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್‌ ಕೆ.ಎಂ.ಮೋಹನರಾಜ್‌ ತಿಳಿಸಿದರು.

RELATED ARTICLES  ಸಂಪನ್ನಗೊಂಡ ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಈಜು ಸ್ಪರ್ಧೆ

‘ಮಾರುಕಟ್ಟೆ ಎದುರು ಖಾಲಿ ಇರುವ ಜಾಗವನ್ನು ಗುರುತಿಸಿದ್ದು, ಜಿಲ್ಲಾಧಿಕಾರಿ ಕೂಡ ಜಾಗವನ್ನು ಪರಿಶೀಲಿಸಿದ್ದಾರೆ. ಮೀನು ಮಾರಾಟ ಮಹಿಳೆಯರ ಜತೆ ಕೂಡ ಈ ಕುರಿತು ಚರ್ಚಿಸಿದ್ದು, ಅವರು ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ನಿರ್ಮಿತಿ ಕೇಂದ್ರವು ಶೀಘ್ರವೇ ಕಾಮಗಾರಿ ಆರಂಭಿಸಲಿದೆ’ ಎಂದು ಮಾಹಿತಿ ನೀಡಿದರು.

ಹೊಸ ಮಾರುಕಟ್ಟೆ ನಿರ್ಮಾಣ ಯಾವಾಗ?: ನಗರದ ಗಾಂಧಿ ಮಾರುಕಟ್ಟೆ ತಾಗಿಕೊಂಡಂತೆ ಇದ್ದ ಮುಖ್ಯ ಮೀನು ಮಾರುಕಟ್ಟೆ ಕಟ್ಟಡ ಶಿಥಿಲಗೊಂಡಿದ್ದರಿಂದ ಎರಡು ವರ್ಷಗಳ ಹಿಂದೆ ಅದನ್ನು ಕೆಡವಲಾಯಿತು. ಅಲ್ಲಿದ್ದ ನೂರಕ್ಕೂ ಅಧಿಕ ಮೀನು ಮಾರಾಟ ಮಹಿಳೆಯರನ್ನು ಕಡಲತೀರದಲ್ಲಿನ ತಾತ್ಕಾಲಿಕ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲಾಯಿತು. ಆದರೆ ಇನ್ನೂ ಹೊಸ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಹೂರ್ತ ಕೂಡಿಬಂದಿಲ್ಲ.

RELATED ARTICLES  ಜನಸಂಖ್ಯಾ ಸಮಸ್ಯೆಗೆ ಜನಜಾಗೃತಿಯೇ ಪರಿಹಾರ- ರವೀಂದ್ರ ಭಟ್ಟ ಸೂರಿ

ಕೆಲ ದಿನಗಳ ಹಿಂದೆ ಕಾರವಾರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಸಜ್ಜಿತ ಮೀನು ಮಾರುಕಟ್ಟೆಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಮೀನು ಮಾರಾಟ ಮಹಿಳೆಯರಲ್ಲಿ ಉದ್ಭವಿಸಿದೆ.

‘ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದ್ದು, ₹ 5 ಕೋಟಿ ಅನುದಾನ ಲಭ್ಯವಿದೆ. ಅಲ್ಲದೇ ನಗರೋತ್ಥಾನ 3ನೇ ಹಂತದ ಯೋಜನೆಯಡಿ ₹ 5 ಕೋಟಿ ಇದಕ್ಕೆ ತೆಗೆದಿರಿಸಲಾಗಿದೆ. ಕಟ್ಟಡ ಕಾಮಗಾರಿಯು ಜನವರಿ ತಿಂಗಳಿಂದ ಆರಂಭವಾಗಲಿದೆ’ ಎಂದು ಮೋಹನರಾಜ್‌ ತಿಳಿಸಿದರು.