ಬೆಂಗಳೂರು: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಯಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯ ಸರ್ಕಾರ ಇದೇ ಪ್ರವೃತ್ತಿ ಮುಂದುವರೆಸಿದರೆ ತಾವೇ ಯೋಜನೆಗಳನ್ನು ಜನತೆಗೆ ನೇರ ತಲುಪಿಸುತ್ತೇವೆ ಎಂಬ ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರದ ಉಜಾಲ (ಎಲ್‌ಇಡಿ ಬಲ್ಬ್ ವಿತರಣೆ), ಉಜ್ವಲ (ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ), ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ರಾಜ್ಯ ಸರ್ಕಾರದ ಬದಲಿಗೆ ಕೇಂದ್ರ ಸರ್ಕಾರವೇ ತನ್ನ ಯೋಜನೆಗಳನ್ನು ನೇರ ಜನತೆಗೆ ತಲುಪಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ. “ಕೇಂದ್ರ ಸರಕಾರದ ಉಜಾಲ ಯೋಜನೆಯಡಿ ಈಗಾಗಲೇ 23.89 ಕೋಟಿ ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಆದರೆ, ಸಾಕಷ್ಟು ಎಲ್‌ಇಡಿ ಬಲ್ಬ್ ಕೊಡುತ್ತೇವೆ ಎಂದು ಹೇಳಿದ್ದರೂ ಕರ್ನಾಟಕ ಕೇವಲ 1.58 ಕೋಟಿ ಮಾತ್ರ ವಿತರಣೆ ಮಾಡಿದೆ. ಅಲ್ಲದೆ, ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಉಜ್ವಲ (ಎಲ್‌ಪಿಜಿ ವಿತರಣೆ) ಯೋಜನೆಯನ್ನು ರಾಜ್ಯ ಸರಕಾರ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಜತೆಗೆ ರಾಜ್ಯದಲ್ಲಿ ಬರ ಇದ್ದರೂ ರೈತರಿಗೆ ಅನುಕೂಲವಾಗುವ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಮಣ್ಣು ಆರೋಗ್ಯ ಕಾರ್ಡ್ ವಿತರಿಸಲು ವಿಳಂಬ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಈ ಆರೋಪವನ್ನು ರಾಜ್ಯ ಸರ್ಕಾರ ಅಲ್ಲಗಳೆದಿದೆ.