ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ನಿನ್ನೆ ವಿಭಿನ್ನವಾದ ಕಾರ್ಯಕ್ರಮ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. 3500 ಮಕ್ಕಳು ಒಂದೇ ಮೈದಾನದಲ್ಲಿ ಮೂರೂವರೆ ತಾಸುಗಳ ಕಾಲ ಪ್ರಸ್ತುತ ಪಡಿಸಿದ ನೃತ್ಯ, ಪಥಸಂಚಲನ, ಸಾಹಸ ಪ್ರದರ್ಶನ, ಕಸರತ್ತುಗಳನ್ನು ಕಂಡ ನೋಡುಗರು ಮಕ್ಕಳ ಪ್ರತಿಭೆಗೆ ತಲೆದೂಗಿದರು.
ಶನಿವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಆವರಣದಲ್ಲಿ ನಡೆದ ಕ್ರೀಡೋತ್ಸವ ಮನಮೋಹಕವಾಗಿ ಮೂಡಿಬಂತು.
250 ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ: ಸುಮಾರು 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿಂದ ಏಳು ಗುಂಪುಗಳಲ್ಲಿ ಸಂಚಲನ, ಹಾಗೂ ಒಂದು ವಿಶೇಷ ಗುಂಪಲ್ಲಿ ಆಕರ್ಷಕ ಕೋವಿ ಸಂಚಲನ ಕ್ರೀಡೋತ್ಸವಕ್ಕೆ ಮೆರುಗು ನೀಡಿತು.
ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಪಥಸಂಚಲನಕ್ಕೆ ನಾವೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಸುಮಾರು 300 ವಿದ್ಯಾರ್ಥಿಗಳು ಗಣೇಶನನ್ನು ಸ್ಮರಿಸುತ್ತಾ ನಡೆಸಿಕೊಟ್ಟ *ಕುಣಿತಭಜನೆ* ನೋಡುಗರನ್ನು ಕೂತಲ್ಲೇ ಕುಣಿಸಿತು. ಸುಮಾರು 290 ಕಾಲೇಜು ವಿದ್ಯಾರ್ಥಿಗಳಿಂದ “ಸುಗ್ಗಿಕೊಯ್ಯರೆ ಪೊಯಿ” ಎನ್ನುವ ತುಳು ಹಾಡಿನ ವಿಶೇಷ ನೃತ್ಯ ಗ್ರಾಮೀಣ ಕೃಷಿ ಬದುಕನ್ನು ತೆರೆದಿಟ್ಟಿತು.
ಕೇರಳದ ಪ್ರಸಿದ್ಧ ಚೆಂಡೆ ಹಾಗೂ ಚಕ್ರತಾಳದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಜಡೆಕೋಲಾಟ, 140 ವಿದ್ಯಾರ್ಥಿಗಳಿಂದ ನಿಯುದ್ಧ(ಕರಾಟೆ) ,500 ವಿದ್ಯಾರ್ಥಿಗಳಿಂದ ಘೋಷ್ ಪ್ರದರ್ಶನ , 200 ವಿದ್ಯಾರ್ಥಿಗಳಿಂದ ದೀಪಾರತಿ ಸಹಿತ ವಿವಿಧ ರಚನೆಗಳು ವಿಶೇಷ ಗಮನ ಸೆಳೆಯಿತು.