ಶಿರಸಿ : ಮಾರಿಕಾಂಬಾ ದೇವಸ್ಥಾನ ಹಾಗೂ ಪ್ರೊಗ್ರಸ್ಸಿವ್ ಹೈಸ್ಕೂಲ್ ನಡುವೆ ನಡೆಯುತ್ತಿದ್ದ ಬಹುದಿನಗಳ ವ್ಯಾಜ್ಯಕ್ಕೆ ಅಧಿಕೃತವಾಗಿ ತೆರೆಬಿದ್ದಿದ್ದು, ಇಬ್ಬರ ನಡುವೆ ಸೌಹಾರ್ದಯುತ ಒಪ್ಪಂದ ನೆರವೇರಿದೆ. ದೇವಸ್ಥಾನದ ಜಾಗವನ್ನು ಪ್ರೊಗ್ರಸ್ಸಿವ್ ಹೈಸ್ಕೂಲ್ ಆಡಳಿತ ಮಂಡಳಿಯವರು ಅಧಿಕೃತವಾಗಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದು, ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ ಈ ಕುರಿತು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೊಂದಿಗೆ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ ” ದೇವಸ್ಥಾನದ ಅಭಿವೃದ್ಧಿಯ ವಿಚಾರವಾಗಿ ಧರ್ಮದರ್ಶಿ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದ ಮೇಲಿರುವ ಕಾನೂನು ವ್ಯಾಜ್ಯ ಮುಗಿಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಪ್ರೊಗ್ರಸ್ಸಿವ್ ಶಿಕ್ಷಣ ಸಂಸ್ಥೆಯವರೊಂದಿಗೆ ಸೌಹಾರ್ದಯುತ ಹೊಂದಾಣಿಕೆ ಆಗಿದೆ. ಮಾರಿಕಾಂಬಾ ದೇವಾಲಯದ ಜಾಗಕ್ಕೆ ಸಂಬಂಧಿಸಿದಂತೆ ಇನ್ನೂ 4 ಪ್ರಕರಣಗಳು ಸಂಘರ್ಷದಲ್ಲಿದೆ. ಎಲ್ಲವನ್ನೂ ಸಹ ನಮ್ಮ ದೇವಾಲಯದ ಎಂದು ಜನರು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದೆ ಬರಬೇಕು. ಪ್ರೀತಿಯಿಂದ ಸ್ಪಂದಿಸಬೇಕು ಎಂದರು.
ಪ್ರೊಗ್ರಸ್ಸಿವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಎಸ್.ಜೈವಂತ್ ಮಾತನಾಡಿ 15 ವರ್ಷದಿಂದ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಸ್ಥಾನಿಕವಾಗಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗಿದೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಾಗಲೇ ಶಿಕ್ಷಣ ಸಂಸ್ಥೆಗೆ ನಗರಸಭೆ ವತಿಯಿಂದ ಇನ್ನೊಂದು ಜಾಗ ಮಂಜೂರಾಗಿದೆ. ಅಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡ ಮೇಲೆ ಪುನಃ ಹೈಸ್ಕೂಲ್ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮನೋಹರ ಮಲ್ಮನೆ, ಶಶಕಲಾ ಚಂದ್ರಪಟ್ಟಣ, ಜಿ.ಜಿ.ಹೆಗಡೆ ಕಡೆಕೋಡಿ, ರಮೇಶ ದುಭಾಶಿ, ಜಗದೀಶ ಗೌಡ, ಲಕ್ಷ್ಮೀದಾಸ ಕಾಸರಗೋಡ ಮುಂತಾದವರು ಇದ್ದರು.