ನವದೆಹಲಿ: ಬಹು ಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಬೆಳಿಗ್ಗೆ ಪ್ರಕಟಿಸಿದೆ. ದೂರಸಂಪರ್ಕ ಇಲಾಖೆಯ ಮಾಜಿ ಸಚಿವ ಎ. ರಾಜಾ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಗಳು ಕನಿಮೋಳಿ ಸೇರಿ 17 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಪ್ರಕರಣದ ಅಂತಿಮ ಹಂತದ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯ ದಲ್ಲಿ ನವೆಂಬರ್‌ನಲ್ಲಿ ಆರಂಭಗೊಂಡಿತ್ತು. ಹಗರಣಕ್ಕೆ ಸಂಬಂಧಿಸಿದ ಒಟ್ಟು ಮೂರು ಪ್ರಕರಣಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ಪೈಕಿ ಒಂದು ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಮತ್ತೆರಡು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು.

RELATED ARTICLES  ಸ್ವಾಮೀಜಿ ನೇಣಿಗೆ ಶರಣು

ಡಿಎಂಕೆ ಕಾರ್ಯಕರ್ತರಲ್ಲಿ ಸಂಭ್ರಮ: ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಹೊರಭಾಗದಲ್ಲಿ 500ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರು ಜಮಾಯಿಸಿದ್ದರು. ಎ. ರಾಜಾ, ಕನಿಮೋಳಿ ಸೇರಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ತೀರ್ಪು ಪ್ರಕಟಿಸುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಿಸಿದರು. ಚೆನ್ನೈನಲ್ಲೂ ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾಗಿ ವರದಿಯಾಗಿದೆ.

30 ಸಾವಿರ ಕೋಟಿ ನಷ್ಟ: ಎ. ರಾಜಾ ಅವರು ದೂರಸಂಪರ್ಕ ಇಲಾಖೆಯ ಸಚಿವರಾಗಿದ್ದಾಗ ನಿಯಮ ಉಲ್ಲಂಘಿಸಿ 2ಜಿ ತರಂಗಾಂತರ ಹಂಚಿಕೆ ಮಾಡಲಾಗಿದೆ. ಇದರಿಂದ ಬೊಕ್ಕಸಕ್ಕೆ ₹ 30 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂಬ ಆರೋಪ ದಾಖಲಾಗಿತ್ತು. ಈ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ರಾಜಾ, ಕನಿಮೋಳಿ ಸೇರಿ 17 ಮಂದಿ ವಿರುದ್ಧ ಆರೋಪ ಹೊರಿಸಿದ್ದವು. ಇದೀಗ, ಆರೋಪವನ್ನು ಸಾಬೀತುಪಡಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಸಿಬಿಐಗೆ ಹಿನ್ನಡೆಯಾಗಿದೆ.

RELATED ARTICLES  ಶೀರೂರು ಶ್ರೀಗಳು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಎಂದ ಪೇಜಾವರ ಶ್ರೀಗಳು!