ಕಾರವಾರ: ಹೊನ್ನಾವರದ ಗಲಭೆ ಪ್ರಕರಣ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಕರಿನೆರಳು ಬಿದ್ದಿದೆ. ಜನರಿಂದ ಸದಾ ಗಿಜಿಗಿಡುತ್ತಿದ್ದ ಮುರ್ಡೇಶ್ವರ,ಹೊನ್ನಾವರ,ಕುಮಟಾ ಗೋಕರ್ಣ ಹಾಗೂ ಕಾರವಾರದ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಪ್ರವಾಸಿಗರ ಸಂಖ್ಯೆ ತುಂಬಾ ವಿರಳವಾಗಿದೆ.

ಹೊನ್ನಾವರದ ಚಂದಾವರದಲ್ಲಿ ಡಿ.6ರಂದು ಉಂಟಾದ ಕೋಮುಗಲಭೆಯು ಹಿಂದೂ ಯುವಕ ಪರೇಶ್‌ ಮೇಸ್ತನ ಸಾವಿನಿಂದ ಇನ್ನಷ್ಟು ಉದ್ವಿಗ್ನಗೊಂಡಿತು. ಪರೇಶ್‌ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕುಮಟಾ, ಕಾರವಾರ ಹಾಗೂ ಶಿರಸಿಯಲ್ಲಿ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ತಲ್ಲಣ ಸೃಷ್ಟಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿ ಹಾಗೂ ವದಂತಿಯು ಜಿಲ್ಲೆಯ ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಿತು.

ಪ್ರವಾಸಿಗರು ವಿಮುಖ: ಸುಮಾರು 10–15 ದಿನಗಳು ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳು ಎಲ್ಲರನ್ನು ಬೆಚ್ಚಿಬೀಳಿಸಿತು. ಅಲ್ಲದೇ ಇದನ್ನು ತಿಳಿದ ಪ್ರವಾಸಿಗರು ಸಹ ಜಿಲ್ಲೆಯ ಪ್ರವಾಸಿ ತಾಣಗಳಿಂದ ವಿಮುಖರಾದರು. ಉದ್ಯೋಗಿಗಳು ವರ್ಷಾಂತ್ಯದಲ್ಲಿ ಬಾಕಿ ಉಳಿದ ರಜೆಗಳನ್ನು ಒಟ್ಟಿಗೆ ತೆಗೆದುಕೊಂಡು ಕುಟುಂಬ ಸಮೇತ ಪ್ರವಾಸಿ ತಾಣಗಳಿಗೆ ಲಗ್ಗೆ ಹಾಕುತ್ತಾರೆ. ಹೀಗಾಗಿ ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ, ಓಂ ಬೀಚ್‌, ಕುಡ್ಲೆ ಬೀಚ್‌, ಕಾರವಾರ ಕಡಲತೀರ ಹಾಗೂ ಇನ್ನಿತರ ತಾಣಗಳಲ್ಲಿ ಪ್ರವಾಸಿಗರ ಕಲರವ ಕಂಡುಬರುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಇದ್ದಾರೆ.

RELATED ARTICLES  ಕೊಂಕಣದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮ.

ರೆಸಾರ್ಟ್‌, ಹೋಟೆಲ್‌ ಉದ್ಯಮಕ್ಕೂ ಹೊಡೆತ: ಪ್ರವಾಸಿಗರ ಸಂಖ್ಯೆ ಕುಸಿದಿರುವುದರಿಂದ ರೆಸಾರ್ಟ್‌, ಹೋಟೆಲ್‌ ಹಾಗೂ ಪ್ರವಾಸಿಗರ ಅವಲಂಬಿತ ಉದ್ಯಮಗಳು ಲಾಭವಿಲ್ಲದೇ ನೆಲಕಚ್ಚಿವೆ. ಪ್ರವಾಸಿ ತಾಣಗಳಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳು ಸಹ ಪ್ರವಾಸಿಗರನ್ನು ಎದುರು ನೋಡುವಂತಾಗಿದೆ.

‘ಟೂರಿಸ್ಟ್‌ ಏಜೆನ್ಸಿ ಮೂಲಕ ಸುಮಾರು 200 ಮಂದಿ ರಷ್ಯನ್ ಪ್ರವಾಸಿಗರು ಗೋವಾದಿಂದ ನಿತ್ಯ ಗೋಕರ್ಣ, ಮುರ್ಡೇಶ್ವರ ಹಾಗೂ ಇನ್ನಿತರ ತಾಣಗಳಿಗೆ ಭೇಟಿ ನೀಡಿ ವಾಪಸ್‌ ಆಗುತ್ತಿದ್ದರು. ಗಲಭೆ ಕಾರಣಕ್ಕಾಗಿ 10 ದಿನಗಳು ಟೂರಿಸ್ಟ್‌ ಬಸ್‌ ಇತ್ತ ಸುಳಿದಿಲ್ಲ. ರಾಜ್ಯದ ನಾನಾ ಭಾಗಗಳಿಂದ ಬರುವ ಪ್ರವಾಸಿಗರ ಸಂಖ್ಯೆಯು ಇಳಿಮುಖವಾಗಿದೆ. ಹೋಟೆಲ್‌, ರೆಸಾರ್ಟ್‌ ಉದ್ಯಮಗಳಿಗೆ ಇದರಿಂದ ಬಿಸಿ ತಟ್ಟಿದೆ.’ ಎನ್ನುತ್ತಾರೆ ಹೊಟೆಲ್ ಮಾಲಿಕರು.

RELATED ARTICLES  "ಸಿಂಧುಮಾತಾ ಕ್ಲಿನಿಕ್" ಕುಮಟಾದಲ್ಲಿ ಉಚಿತ ಕಿವಿಯ ಶ್ರವಣ ಪರೀಕ್ಷಾ ಶಿಬಿರ

ಸ್ವಲ್ಪ ಚೇತರಿಕೆ: ‘ಜಿಲ್ಲೆಯ ಪರಿಸ್ಥಿತಿಯು ಶಾಂತವಾಗಿದ್ದು, ಗಲಭೆ ಪೀಡಿತ ಪ್ರದೇಶಗಳ ಜನಜೀವನ ಸಹಜಸ್ಥಿತಿಗೆ ಬಂದಿದೆ. ಹೀಗಾಗಿ ಕಳೆದೆರಡು ದಿನಗಳಿಂದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಹೊಸ ವರ್ಷಕ್ಕೆ ಇನ್ನೂ 10 ದಿನಗಳು ಬಾಕಿ ಇರುವುದರಿಂದ ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ವ್ಯಾಪಾರಿಗಳು.