“ನಾವು ನಮ್ಮಿಷ್ಟ”
ಫೇಸ್ ಬುಕ್ ಮಿತ್ರರ
ಸ್ನೇಹ ಸಂಭೃಮ
“ಸಭ್ಯತೆಯಿಂದ ನಿಮ್ಮ ಬಿಡುವಿನ ಸಮಯದಲ್ಲಿ..ಬನ್ನಿ ,ಬಿಂದಾಸ್ ಮಾತಾಡಿ,ನಾವು ನಮ್ಮಿಷ್ಟ…ನಂಗೋ ನಂಗ್ಲಿಷ್ಟ.” ಎಂಬ ಧ್ಯೇಯ ವಾಕ್ಯದೊಂದಿಗೆ 2012 ರಲ್ಲಿ ಪ್ರಾರಂಭವಾದ “ನಾವು ನಮ್ಮಿಷ್ಟ” ಎಂಬ ಹೆಸರಿನ ಫೇಸ್ ಬುಕ್ ಬಳಗದ ಮಿತ್ರರೆಲ್ಲ ಸೇರಿ ವರ್ಷಕ್ಕೊಮ್ಮೆ ನಡೆಸುವ “ಸ್ನೇಹ ಸಂಭೃಮ” ದ ಈ ವರ್ಷದ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 24 ರವಿವಾರ ದಂದು ಹೊನ್ನಾವರ ತಾಲೂಕ ಬಡಗಣಿ ಸಮೀಪದ ‘ಗೋ ಗ್ರೀನ್ ರೆಸಾರ್ಟ’ ನಲ್ಲಿ ಜರುಗಲಿದೆ.ಗ್ರೂಪ ನ ಎಡ್ಮಿನ್ ಗಳಾಗಿರುವ ಶ್ರೀ ಸೂರ್ಯನಾರಾಯಣ ಹೆಗಡೆ ಕಡತೋಕಾ, ಶ್ರೀಮತಿ ಸಾವಿತ್ರಿ ರಮೇಶ ಶಿರಸಿ ಇವರುಗಳೊಂದಿಗೆ ಇವರ ಮಿತ್ರವೃಂದ ಒಂದೆಡೆ ಸೇರಿ ದಿನವಿಡೀ ಸಂಭೃಮಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಸ್ಪರ್ಧೆಗಳನ್ನು ಆಯೋಜಿಸಿದ್ದು ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ವರ್ಷವಿಡೀ ಈ ಫೇಸ್ ಬುಕ್ ಗ್ರೂಪನಲ್ಲಿ ಮಿತ್ರರೆಲ್ಲ ಹವಿಗನ್ನಡ (ಹವ್ಯಕ ಕನ್ನಡ)ದಲ್ಲೇ ತಮ್ಮ ತಮ್ಮ ಪೋಸ್ಟ್ ಹಾಗೂ ಕಮೆಂಟಗಳ ಮೂಲಕ ಬಿಂದಾಸ್ ಮಾತನ್ನಾಡುತ್ತಿರುತ್ತಾರೆ. ಹಾಸ್ಯ ಚಟಾಕಿ ಭಾರಿಸುತ್ತಿರುತ್ತಾರೆ.ಹವ್ಯಕ ಸಮಾಜದ ಸುಮಾರು ೨೦೦೦ ದಷ್ಟು ಮಿತ್ರರನ್ನೊಳಗೊಂಡ
ಈ ಗ್ರೂಪನಲ್ಲಿ ಯುವಕರು,ಯುವತಿಯರಲ್ಲದೇ ಮಧ್ಯಮ ವಯಸ್ಸಿನ ,ಹಿರಿಯ ವಯಸ್ಸಿನ ಮಹನೀಯರು,ಮಹಿಳೆಯರೂ ಸಕ್ರಿಯರಾಗಿದ್ದಾರೆ.ಗ್ರೂಪ್ ನಲ್ಲಿ “ತಮಾಷೆಯೇ
ಪ್ರಧಾನವಾದರೂ ಸಭ್ಯತೆ ಮೀರುವಂತಿಲ್ಲ” , ಯಾವುದೇ ಪ್ರಚೋದನಾತ್ಮಕ, ವೈಯಕ್ತಿಕ ಟೀಕೆಗಿಲ್ಲಿ ಅವಕಾಶವಿಲ್ಲ. ರಾಜಕೀಯದ ಉದ್ದೇಶವೂ ಇಲ್ಲಿಲ್ಲ.ಉತ್ತರ ಕನ್ನಡ ಜಿಲ್ಲೆಯವರಷ್ಟೇ ಅಲ್ಲದೇ ರಾಜ್ಯದೆಲ್ಲೆಡೆ ಅಷ್ಟೇಯೇಕೆ ವಿದೇಶಗಳಲ್ಲೂ ಗ್ರೂಪನ ಕ್ರಿಯಾಶೀಲ ಸದಸ್ಯರಿರುವುದು ವಿಶೇಷ.
ಇಂದಿನ ದಿನಮಾನದಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವುದು ಒಂದೆಡೆಯಾದರೆ ಈ ಗ್ರೂಪ್ಪೇ ಒಂದು ಅವಿಭಕ್ತ ಕುಟುಂಬದ ಕಲ್ಪನೆಯಲ್ಲಿ ರೂಪುಗೊಂಡಿದ್ದು ವರ್ಷಕ್ಕೊಮ್ಮೆ ಪರಸ್ಪರ ಮುಖತ: ಭೇಟಿ – ಪರಿಚಯದ ಉದ್ದೇಶ ಹೊಂದಿ ಒಂದೆಡೆ ಈ ಮನೆಯವರೆಲ್ಲರೂ ಸೇರಿ ಆತ್ಮೀಯತೆಯನ್ನು ಇನ್ನಷ್ಟು ಘಾಢವಾಗಿರಿಸಿಕೊಳ್ಳಲು ಆಚರಿಸುತ್ತ ಬಂದಿರುವ ಈ ಮನೆಯ “ಹಬ್ಬ”ವೇ ಈ “ಸ್ನೇಹ ಸಂಭೃಮ” ಎಂಬುದು ಎಡ್ಮಿನ್ ಸೂರ್ಯನಾರಾಯಣ ಹೆಗಡೆಯವರು ಕೊಡುವ ವಿವರಣೆ.
ಕೇವಲ ಮನರಂಜನೆಯಷ್ಟೇ ಅಲ್ಲದೇ ಗ್ರೂಪ್ ಸದಸ್ಯರು ಹವ್ಯಕ ಸಂಪ್ರದಾಯ,ಆಚರಣೆ, ಹವ್ಯಕ ಭಾಷೆಗಳ ಉಳಿವು- ಬೆಳೆವು ಬಗ್ಗೆ ಒತ್ತು ನೀಡುತ್ತಿದೆ. ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು ಗ್ರೂಪ ಸದಸ್ಯರಿಗೆ ತುರ್ತು ರಕ್ತದ ಅವಶ್ಯಕತೆ ಯಿದ್ದಾಗ ರಕ್ತದಾನ ಮಾಡುವುದು,ದೂರದ ಬೆಂಗಳೂರಿನಲ್ಲೋ ಶಿವಮೊಗ್ಗಾದಲ್ಲೋ,ಮೈಸೂರಲ್ಲೋ ಶೈಕ್ಷಣಿಕ/ನೌಕರಿ ಉದ್ದೇಶ ಕ್ಕಾಗಿ ವಾಸ್ತವ್ಯಕ್ಕಾಗಿ ಸದಸ್ಯರಿಗಾರಿಗಾದರೂ ಪಿ.ಜಿ.ಯ ಅವಶ್ಯಕತೆಯಿದ್ದಾಗ , ಸದಸ್ಯರು ಪರಸ್ಥಳಕ್ಕೆ ಪ್ರವಾಸಕ್ಕೆ ಹೋದಾಗಿನ ಸಂದರ್ಭದಲ್ಲಿ ಯಾವುದೇ ಅಗತ್ಯತೆ ಕಂಡುಬಂದಾಗಲೆಲ್ಲ ಗ್ರೂಪನಲ್ಲಿ ವಿಷಯ ವಿವರಿಸಿ ಪೋಸ್ಟ್ ಹಾಕುವ ರೂಢಿ ಇಟ್ಟುಕೊಂಡಿದ್ದು ಆಯಾ ಊರಿನಲ್ಲಿ ನೆಲೆಸಿರುವ ಸದಸ್ಯರು ಸಹಕರಿಸಲು ಧಾವಿಸುತ್ತಾರೆ.ಅವಶ್ಯವುಳ್ಳವರಿಗೆ ವೈಯಕ್ತಿಕ ನೆಲೆಯಲ್ಲಿಯೂ ಒಬ್ಬರಿಗೊಬ್ಬರು ಧನ ಸಹಾಯ ನೀಡುತ್ತಿರುತ್ತಾರೆ.
“ಸ್ನೇಹ ಸಂಭೃಮ” ದ ಖರ್ಚಿನ ಬಗ್ಗೆ ಸ್ವ ಇಚ್ಛೆಯಿಂದಲೇ ನೀಡುವ ಸದಸ್ಯರಿಂದ ಸಂಗ್ರಹಿಸಿದ ಹಣ , ಖರ್ಚು ವೆಚ್ಚಗಳ ಲೆಕ್ಕವನ್ನು ಪಾರದರ್ಶಕವಾಗಿರಿಸಿಕೊಳ್ಳುತ್ತಾರೆ. ಸಂಗ್ರಹಿಸಿದ ಮೊತ್ತದಲ್ಲಿ ಉಳಿತಾಯವಾದುದನ್ನು ಅನಾಥಾಶ್ರಮಕ್ಕೋ,ವೃದ್ಧಾಶ್ರಮಕ್ಕೋ , ಬಡವರಿಗೋ, ಶೈಕ್ಷಣಿಕ ವಿದ್ಯಾಲಯಕ್ಕೋ ದಾನ ಮಾಡುತ್ತ ಆ ಹಣ ಸದ್ವಿನಿಯೋಗ ವಾಗುವಂತೇ ನೋಡಿಕೊಳ್ಳುತ್ತಾರೆ.
ವರ್ಷವಿಡೀ ಫೇಸ್ ಬುಕ್ ಗ್ರೂಪ ನಲ್ಲಿ ವಿವಿಧ ಜಾನಪದ ಸಾಂಪ್ರದಾಯಿಕ ಹಾಡಿನ ಸ್ಪರ್ಧೆ,ಕಥೆ ಕವನ ಸ್ಪರ್ಧೆಗಳು ಮುಂತಾದ ಸ್ಪರ್ಧಾ ಕಾರ್ಯಕ್ರಮ ನೆರವೇರಿಸುತ್ತ ಈ ಹಬ್ಬದ ದಿನ ಮನೆಯವರೆಲ್ಲರ ಎದುರು ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತ , ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರನ್ನು,ಪ್ರತಿಭಾವಂತರನ್ನು,ಸಾಧಕರನ್ನು ಗೌರವಿಸುತ್ತಾರೆ.ಪ್ರತಿಭಾನ್ವಿತರನ್ನೂ ಉದಯೋನ್ಮುಖ ಕಲಾವಿದರನ್ನೂ ಗುರುತಿಸಿ ವೇದಿಕೆ ಕಲ್ಪಿಸುತ್ತ ಸಂಭೃಮಿಸುತ್ತಾರೆ.ಈ ಸಂಭೃಮದ ದಿನದಂದು ಮುಂಜಾನೆ ಸದಸ್ಯ ಕುಟುಂಬದವರೆಲ್ಲರ ಶ್ರೇಯೋಭಿವೃದ್ಧಿಗಾಗಿ ಶ್ರೀ ದೇವರ ಪೂಜಾ ಸೇವೆಯಿಂದ ಆರಂಭವಾಗಿ ದಿನವಿಡೀ ಕಾರ್ಯಕ್ರಮ ಗಳು ನಡೆಯುತ್ತವೆ.ಬೆಳಗಿನ ಉಪಹಾರ-ಮಧ್ಯಾನ್ನದ ಭೋಜನ ಗಳಲ್ಲಿ ಅಪ್ಪಟ ಗ್ರಾಮೀಣ ಹವ್ಯಕರ ತಿಂಡಿ ತಿನಿಸು,ಸಿಹಿ ಸಿಹಿ ಕಜ್ಜಾಯ,ವಿಶೇಷ ಅಡುಗೆ ಪದಾರ್ಥಗಳನ್ನೇ ತಯಾರಿಸಿ ತಿಂದುಂಡು ಖುಷಿಪಡುತ್ತಾರೆ.
ಜಂಜಾಟದ ಇಂದಿನ ಒತ್ತಡದ ಜೀವನದ ಮಧ್ಯೆ ಅಲ್ಲೇ ಬಿಡುವು ಮಾಡಿಕೊಂಡು ಮಿತ್ರರೊಂದಿಗೆ ತಮ್ಮ ತಮ್ಮ ತಮಾಷೆಗಳನ್ನು ವರ್ಷವಿಡೀ ಗ್ರೂಪನಲ್ಲಿ ಹಂಚಿಕೊಳ್ಳುತ್ತ ,ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತ ತಮ್ಮಲ್ಲಿನ ಭಾರವನ್ನು ಹಗುರಗೊಳಿಸಿಕೊಳ್ಳುತ್ತಿರುತ್ತಾರೆ.
ಈ ಎಲ್ಲ ತಮಾಷೆಗಳನ್ನೂ ತಮಾಷೆಯಾಗಿಯೇ ಕೊಂಡೊಯ್ಯುತ್ತ ಎಲ್ಲಿಯೂ ಸಭ್ಯತೆ ಮೀರದಂತೆ ಲಕ್ಷ್ಯವಹಿಸುತ್ತ ಎಡ್ಮಿನ್ ಸೂರ್ಯನಾರಾಯಣ ಹೆಗಡೆಯವರು ಸದಸ್ಯರೆಲ್ಲರಿಗೂ ಪ್ರೀತಿಯ “ಸೂರಣ್ಣ” ನಾಗಿ ಅಷ್ಟೇ ಪ್ರೀತಿಯಿಂದ ಈ ಅವಿಭಕ್ತ ಕುಟುಂಬವನ್ನು ಪರಸ್ಪರ ಆತ್ಮೀತಯತೆಯಿಂದಲೇ ನಮ್ಮಿಷ್ಟದ “ಮಾದರೀ ಮನೆ”ಯನ್ನಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಅನುಕರಣೀಯ.
. – “ನಾವು ನಮ್ಮಿಷ್ಟ” ಕುಟುಂಬದ ಓರ್ವ ಅಭಿಮಾನೀ ಕಿರಿಯ ಸದಸ್ಯ ,
ಜಯದೇವ ಬಳಗಂಡಿ,ಕುಮಟಾ.9448302509.