ಕುಮಟಾ : ನಮ್ಮ ದೇಶದಲ್ಲಿ ಡಿ.23ರಂದು ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ನಮ್ಮ ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತರ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಅದರಂತೆ ಕುಮಟಾ ತಾಲೂಕಿನ ಕೃಷಿ ಇಲಾಖೆಯಲ್ಲಿ ಕೂಡ ರೈತ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ನಮ್ಮ ಮಾಜಿ ಪ್ರಧಾನಿಗಳು ರೈತರ ಕಷ್ಟಗಳನ್ನು ಅರಿತು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಅಂದು ಜಾರಿ ಮಾಡಿದ್ರು. ಅದರಂತೆ ನಮ್ಮ ಸರಕಾರ ಕೂಡ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ರೈತರು ನಮ್ಮ ದೇಶದ ಬೆನ್ನೆಲಬು ಅತಂಹ ರೈತರ ಕಷ್ಟಕ್ಕೆ ನಾವು ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ, ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿಯಲ್ಲಿ ಪ್ರಗತಿ ಸಾಧಿಸಿದ ಅನೇಕ ರೈತರಿಗೆ ಪ್ರಶಸ್ತಿ ಪತ್ರ ನೀಡುವ ಮೂಲಕ ಗೌರವಿಸುವ ಕಾರ್ಯ ನಡೆಯಿತು. ಈ ವೇಳೆ ಕಾಳು ಮೆಣಸು,ರೇಷ್ಮೆಯತಂಹ ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಯಿತು. ಜೊತೆಗೆ ಬೇಸಾಯದ ವೇಳೆ ಅಪಘಾತಗೊಂಡವರು,ಮೃತಪಟ್ಟವರ ಕುಟುಂಬಕ್ಕೆ ಸಹಾಯಧನವನ್ನು ಕೂಡ ನೀಡಲಾಯಿತು. ಅಲ್ಲದೆ ಅನೇಕ ರೀತಿಯ ಕೃಷಿಗೆ ಸಹಾಯಕವಾಗುವ ಯಂತ್ರೋಪಕರಣಗಳನ್ನು ಫಲಾನುಭವಿಗಳಿಗೆ ಶಾಸಕರ ಸಮ್ಮುಖದಲ್ಲಿ ವಿತರಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಹಾಜರಿದ್ದ ತಾಲೂಕಾ ಕಾರ್ಯನಿರ್ವಾಹಣಾಧಿಕಾರಿ ಮಹೇಶ ಕುರಿಯವರನ್ ಮಾತನಾಡಿ ಸರಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಟಾ ತಾಲೂಕಾ ಪಂಚಾಯತ ಅಧ್ಯಕ್ಷರಾದ ವಿಜಯ ಪಟಗಾರ ವಹಿಸಿದ್ರು, ಉಪಾಧ್ಯಕ್ಷರಾದ ಗೀತಾ ಮುಕ್ರಿ, ಕೃಷಿ ನಿರ್ದೇಶಕರಾದ ಮುನಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.