ಭಟ್ಕಳ: ‘ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂದರ್ಭದಲ್ಲಿ ಪಕ್ಷ-, ಪಂಗಡ-, ಮತದ ದೃಷ್ಠಿಯನ್ನು ಬದಿಗಿಟ್ಟು, ಸಮಾಜ ಸೇವೆ ಎಂದು ಕೆಲಸ ಮಾಡಬೇಕು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲ್ಲೂಕಿನ ಹಾಡವಳ್ಳಿ ಸಮೀಪದ ಆರ್ಕಳದಲ್ಲಿ ಗುರುವಾರ ನಮ್ಮ ಗ್ರಾಮ ನಮ್ಮ ರಸ್ತೆ ಹಂತ- 4ರ ಯೋಜನೆಯಡಿ ಆರ್ಕಳದಿಂದ ಸಾಗರ ಗಡಿವರೆಗೆ 3.11 ಕಿ. ಮೀ. ಉದ್ದದ ₹ 2.43 ಕೋಟಿ ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಕುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ಕಾರದ ಈ ಯೋಜನೆಯಡಿ ಸದ್ಯ ಭೂಮಿಪೂಜೆ ನೆರವೇರಿಸಿರುವ ಈ ಗ್ರಾಮದಲ್ಲಿ ಬೆರಳೆಣಿಕೆಯ ಮತದಾರರಿದ್ದಾರೆ. ರಾಜಕೀಯವಾಗಿ ನಾವು ಯೋಚಿಸುವುದಾದರೆ ಕೋಟ್ಯಾಂತರ ರೂಪಾಯಿ ವಿನಿಯೋಗ ಅಸಾಧ್ಯವಾಗುತಿತ್ತು. ಆದರೆ ಕಾಡಿನ ಮಧ್ಯ ರಸ್ತೆ ಸಮಸ್ಯೆಯಿಂದ ಬಡವರು ಶಿಕ್ಷಣ, ಆರೋಗ್ಯ, ಉದ್ಯೋಗದಿಂದ ವಂಚಿತರಾಗಬಾರದು ಎನ್ನುವುದನ್ನು ಮನಗಂಡು ಕಾಮಗಾರಿ ಮಂಜೂರಿ ಮಾಡಲಾಗಿದೆ’ ಎಂದರು.
‘ಸಾರ್ವಜನಿಕರು ಕಾಮಗಾರಿ ಹಂತದಲ್ಲಿ ಪ್ರತಿನಿತ್ಯ ಗುಣಮಟ್ಟ ಗಮನಿಸುತ್ತಿರಬೇಕು. ಕಳಪೆ ಕಂಡು ಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತನ್ನಿ’ ಎಂದು ಸೂಚಿಸಿದರು. ಹಾಡವಳ್ಳಿ ಪಂಚಾಯ್ತಿ ಅಧ್ಯಕ್ಷ ಶ್ರೀಧರ ಶೆಟ್ಟಿ ಸಚಿವರನ್ನು ಸನ್ಮಾನಿಸಿ, ಅತಿಕ್ರಮಣದಾರರ ಪರವಾಗಿ ಮನವಿ ನೀಡಿದರು. ಸಾಗರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತಾಳಗುಪ್ಪ ಜಿಲ್ಲಾಪಂಚಾಯ್ತಿ ಸದಸ್ಯ ರಾಜಶೇಖರ ಗಾಳಿಪುರ, ಚನ್ನಗೊಂಡ ಪಂಚಾಯ್ತಿ ಅಧ್ಯಕ್ಷೆ ಆರತಿ ಉದಯಕುಮಾರ, ಉಪಾಧ್ಯಕ್ಷ ವಿಜಯಕುಮಾರ ಹಾಜರಿದ್ದರು.