ಕಾರವಾರ: ಇಲ್ಲಿನ ಕಾಳಿ ನದಿಯ ದಂಡೆಯ ಮೇಲಿರುವ ಕಾಳಿ ರಿವರ್‌ ಗಾರ್ಡನ್‌ನಲ್ಲಿ ಇದೇ 26ರಿಂದ 30ರವರೆಗೆ ‘ಕಾರವಾರ ಆಹಾರ ಮೇಳ’ವನ್ನು ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಕರಾವಳಿಯ ವಿಶೇಷ ಖಾದ್ಯಗಳು ತಿಂಡಿಪ್ರಿಯರ ಬಾಯಲ್ಲಿ ನೀರು ತರಿಸಲಿದೆ.

ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಲೀಸರ್‌ ರೂಟ್ಸ್‌ ಸಂಸ್ಥೆಯು ಈ ಮೇಳವನ್ನು ಆಯೋಜಿಸಿದ್ದು, ಐದು ದಿನಗಳವರೆಗೆ ನಡೆಯಲಿದೆ. ಆಹಾರ ತಯಾರಿಕಾ ಕೆಲ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಸುಮಾರು 70ಕ್ಕೂ ಅಧಿಕ ನಮೂನೆಯ ಖಾದ್ಯಗಳು ಇಲ್ಲಿ ಸವಿಯಲು ಸಿಗಲಿದೆ.

ವಿವಿಧ ನಮೂನೆಯ ಬಿರಿಯಾನಿ, ಸಮುದ್ರ ಆಹಾರಗಳು, ಕರಾವಳಿಯ ತಿಂಡಿ– ತಿನಿಸುಗಳು, ಚಾಟ್ಸ್, ಸಾವಯವ ಆಹಾರಗಳು, ಚೈನೀಸ್‌ ಆಹಾರಗಳು ಇಲ್ಲಿ ದೊರೆಯಲಿವೆ. ವಿಶೇಷವಾಗಿ ಕಾರವಾರ ಹಾಗೂ ಮಂಗಳೂರು ಶೈಲಿಯ ಆಹಾರಗಳು ಇಲ್ಲಿ ಗಮನ ಸೆಳೆಯಲಿವೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮತ್ಸದರ್ಶಿನಿ ಮಳಿಗೆಯಲ್ಲಿ ಸಿಗಡಿ (ಪ್ರಾನ್ಸ್‌), ಏಡಿ, ಕಿಂಗ್‌ ಫಿಶ್‌, ಸಾಲ್‌ಮೊನ್‌, ಸ್ಕ್ವಿಡ್‌, ಪಾಂಪ್ಲೆಟ್‌, ಫಿಶ್‌ ಕಟ್‌ಲೆಟ್‌, ಫಿಶ್‌ ಕಬಾಬ್‌, ಲ್ಯಾಬ್‌ಸ್ಟರ್‌ ಬೈಟ್‌, ಫಿಶ್‌ ಫಿಂಗರ್‌ ಖಾದ್ಯಗಳಿರುತ್ತವೆ.

RELATED ARTICLES  ಸಂಘಟನೆಗಳು ಬಡ ಜನರಿಗೆ ಸರಕಾರದ ಸೌಲಭ್ಯ ತಲುಪಿಸುವಲ್ಲಿಯೂ ಶ್ರಮಿಸಬೇಕು - ನಾಗರಾಜ ನಾಯಕ ತೊರ್ಕೆ

ಇನ್ನು ರತ್ನಾಸ್‌ ಕೆಎ–30 ಸಂಸ್ಥೆಯಿಂದ ಮಂಗಳೂರಿನ ಕೋರಿ ರೋಟಿ, ನೀರ್‌ದೋಸೆ ಜತೆ ಚಿಕ್ಕನ್ ಸುಕ್ಕಾ, ಚಿಕನ್ ಘೀ ರೋಸ್ಟ್‌ ಸೇರಿದಂತೆ ಕರಾವಳಿ ಖಾದ್ಯಗಳು ಸಿದ್ಧವಾಗಲಿದೆ. ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ಸಿರಿ ಧಾನ್ಯ ಆಹಾರಗಳು ಇಲ್ಲಿ ಸಿಗಲಿದೆ.

‘ಈಗಾಗಲೇ ಸುಮಾರು 16 ಆಹಾರ ತಯಾರಕರು ಈ ಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಂಸಾಹಾರದಲ್ಲಿ ರತ್ನಾಸ್ ಕೆಎ 30, ಕೆಎಫ್‌ಡಿಸಿಯ ಮತ್ಸ್ಯದರ್ಶಿನಿ, ಶಾಖಾಹಾರದಲ್ಲಿ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಧಾನ್ಯ ಆಹಾರ ಮಳಿಗೆ ಹಾಗೂ ರತ್ನಾ ಸಾಗರ್‌ ಮಳಿಗೆಗಳು ಇರಲಿದೆ. ಇದರ ಜತೆಗೆ ಇಲ್ಲಿಯ ಸ್ಥಳೀಯರ ಆಹಾರಗಳ ಮಳಿಗೆಗಳು ಇರಲಿದೆ. ಒಟ್ಟು 20 ಮಳಿಗೆಗಳನ್ನು ಇಡಲು ಅವಕಾಶ ನೀಡಲಾಗುತ್ತಿದೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ: 7899508888 ಗೆ ಕರೆ ಮಾಡಬಹುದು.

RELATED ARTICLES  ಮನೆ ಹಾಗೂ ಬ್ಯಾಂಕ್ ಕಳ್ಳತನದ ಆರೋಪಿ ಪೊಲೀಸ್ ಬಲೆಗೆ

‘ಪ್ರತಿದಿನ ಸಂಜೆ 4ರಿಂದ ರಾತ್ರಿ 10ವರೆಗೆ ಆಹಾರ ಮೇಳ ನಡೆಯಲಿದ್ದು, ಸಂಜೆ 7ರಿಂದ ರಾತ್ರಿ 9.30ರವರೆಗೆ ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗಿದೆ. ಇದೇ 26ರ ಸಂಜೆ ರಿಧಂ ಆಫ್‌ ಲವ್, 27ಕ್ಕೆ ಸಿಲ್ವಿಯಾ ಬೀಟ್‌ರೂಟ್‌ ಜ್ಯಾಮ್, 28ಕ್ಕೆ ಕಾರವಾರ ಕರೋಕೆ ಕ್ಲಬ್‌, 29ರಂದು ವೈಲ್ಡ್‌ ಬೀಟ್‌ ಬ್ಯಾಂಡ್ ಹಾಗೂ 30ರಂದು ಸ್ವರ ಸಂಗೀತ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಆಟಿಕೆಗಳನ್ನು ಮೇಳದಲ್ಲಿ ಇಡಲಾಗುತ್ತಿದೆ. ಇಲ್ಲಿನ ಪ್ರತಿ ದಿನದ ಕಾರ್ಯಕ್ರಮಗಳ ಮಾಹಿತಿಗಳನ್ನು ‘ಕೋ ರೋವರ್ ಕನೆಕ್ಟ್‌’ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಮೇಳಕ್ಕೆ ₹ 20 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ’ ಎಂದರು.