ಕಾರವಾರ, ಡಿಸೆಂಬರ್ 24: “ಮಕ್ಕಳ ಕೈಯಲ್ಲಿ ಪೆನ್ನು‌ ಇರ್ಬೇಕು. ಅವರ ಕೈಗೆ ಕಲ್ಲು ನೀಡ್ಬಾರ್ದು. ಕಲ್ಲು ಕೊಡುವವರ ಕೈ ಮುರಿಯಬೇಕು,” ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ವಿದ್ಯಾಭ್ಯಾಸ ನಡೆಸಿದ ಸಿದ್ದಾಪುರ ತಾಲ್ಲೂಕಿನ ದೊಡ್ಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭ ಈ ಹೇಳಿಕೆ ನೀಡಿದರು. ವಿಶೇಷ ಶಾಲಾಭಿವೃದ್ಧಿ ಯೋಜನೆಯಡಿ ಮಂಜೂರಾದ 36.28 ಲಕ್ಷ ರೂ. ಅನುದಾನದಲ್ಲಿ ಶಾಲೆಯಲ್ಲಿ ಕೈಗೆತ್ತಿಕೊಳ್ಳಲಾದ ಕೊಠಡಿ ಕಾಮಗಾರಿಗಳನ್ನು ಶನಿವಾರ ದೇಶಪಾಂಡೆ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, “ಹೊಡಿ, ಬಡಿ, ಬೆಂಕಿ ಹಚ್ಚು ಎಂಬುದಕ್ಕೆ ಉತ್ತೇಜನ ನೀಡಕೂಡದು. ಈ ರೀತಿ ಮಾಡುವವರಿಗೆ ಜನರು ಉತ್ತರ ಹೇಳಬೇಕು. ಕಾನೂನು ಕೈಗೆ ತೆಗೆದುಕೊಳ್ಳುವವರಿಗೆ ಶಿಕ್ಷೆ ಆಗಬೇಕು. ಪ್ರಗತಿ ಮಾಡಲು, ಸಾಮಾಜಿಕ ನ್ಯಾಯ ನೀಡಲು, ಬಡವರ, ರೈತರ ಪರ ಕಾರ್ಯಕ್ರಮ ಮಾಡಲು ಸಾಧ್ಯವಾಗದಿದ್ದಾಗ ಇಂತಹ ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ. ಜಾತಿ, ಜಾತಿಯ ಮಧ್ಯೆ ಮತ್ತು ಧರ್ಮ, ಧರ್ಮದ ಮಧ್ಯೆ ಬೆಂಕಿ ಹಚ್ಚಿ ಏನು ಸಾಧನೆ ಮಾಡುತ್ತೀರಿ?” ಎಂದು ಪ್ರಶ್ನಿಸಿದರು.

RELATED ARTICLES  ಕೃಷ್ಣಮೂರ್ತಿ ಶೇಟ ಇವರ ಚಿಕತ್ಸೆಗಾಗಿ ಶಾಸಕ ಮಾಂಕಾಳ ವೈದ್ಯ ಧನ ಸಹಾಯ

 

“ಉತ್ತರ ಕನ್ನಡ ಸುಸಂಸ್ಕೃತ ಜನರ ಜಿಲ್ಲೆ. ಇಲ್ಲಿಯ ಜನರು ಬಡವರಿರಬಹುದು. ಆದರೆ ಗಲಾಟೆ, ಗಲಭೆ ಮಾಡುವವರಲ್ಲ. ಅವರ ನಡುವೆ ವಿಷದ ಬೀಜ ಬಿತ್ತುವ ಕೆಲಸವಾಗುತ್ತಿದೆ.” ಎಂದು ದೇಶಪಾಂಡೆ ಕಿಡಿಕಾರಿದರು.

ದೊಡ್ಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಕ್ರಮಕ್ಕೆ ಬರುವ ಮೊದಲು ಸಿದ್ದಾಪುರ ಪಟ್ಟಣದಲ್ಲಿರುವ, ವಿಧಾನಸಭೆ ಚುನಾವಣೆಯಲ್ಲಿ ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಾಗಿರುವ ಶಶಿಭೂಷಣ ಹೆಗಡೆ ಅವರ ಮನೆಗೆ ಭೇಟಿ ನೀಡಿದರು.

RELATED ARTICLES  ಪ್ರತಿಯೊಬ್ಬರಲ್ಲೂ ಪ್ರತಿಭೆ ಅಂತರ್ಗತವಾಗಿರುತ್ತದೆ. ನಾಗರಾಜ ನಾಯಕ ತೊರ್ಕೆ

ಈ ಕುರಿತು ಮಾಧ್ಯಮದವರು ಪ್ರಶ್ನಿಸಿದರೆ, “ಇದರಲ್ಲಿ ರಾಜಕೀಯ ತರಬೇಡಿ. ನನಗೆ ರಾಜಕೀಯ ಎಂಬುದು ದಂಧೆ ಅಲ್ಲ. ಶಶಿಭೂಷಣ ಹೆಗಡೆ ಅವರ ಮನೆಯಲ್ಲಿ ಅಮ್ಮ (ಗಣೇಶ ಹೆಗಡೆ ಅವರ ಪತ್ನಿ) ಇದ್ದಾರೆ. ಶಶಿ ನನಗೆ ಮಗ ಇದ್ದ ಹಾಗೆ. ಆದ್ದರಿಂದ ಅವರನ್ನು ನೋಡಲು ಹೋಗಿದ್ದೆ. ನನಗೆ ಎಸ್‌.ಎಂ.ಕೃಷ್ಣ ಸೇರಿದಂತೆ ಹಲವು ಬೇರೆ ಪಕ್ಷಗಳ ರಾಜಕೀಯ ಧುರೀಣರೊಂದಿಗೆ ಉತ್ತಮ ಸಂಬಂಧ ಇದೆ,” ಎಂದು ಪ್ರತಿಕ್ರಿಯೆ ನೀಡಿದರು.

“ನಾನು ಹಲವು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ. ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿ ಕೂಡ ಗಲಭೆ, ಗಲಾಟೆಗೆ ಉತ್ತೇಜನ ನೀಡಿಲ್ಲ,” ಎಂದು ದೇಶಪಾಂಡೆ ಹೇಳಿದರು.