ಬೆಂಗಳೂರು: ‘ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ. ಅದನ್ನು ಮಾಡಿಯೇ ಮಾಡುತ್ತೇವೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಕೊಪ್ಪಳದಲ್ಲಿ ನಡೆದ ಬ್ರಾಹ್ಮಣ ಮಹಾಸಭಾದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಮನುಸ್ಮೃತಿ ಹಳೆಯದು ಎನ್ನಲಾಗುತ್ತಿದೆ. ಅಂತೆಯೇ ಅಂಬೇಡ್ಕರ್ ಸ್ಮೃತಿಯೂ ಈಗ ಹಳೆಯದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾಗಿರುವ ಸಂವಿಧಾನವನ್ನೂ ಅನೇಕ ಬಾರಿ ಬದಲಾಯಿಸಲಾಗಿದೆ. ನಾವೂ ಸಂವಿಧಾನ ಬದಲಾವಣೆ ಮಾಡಿಯೇ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ಜಾತ್ಯತೀತರು, ವಿಚಾರವಾದಿಗಳ ಬಗ್ಗೆ ಅನಂತಕುಮಾರ ಹೆಗಡೆ ಅವಹೇಳನಕಾರಿಯಾಗಿ ಟೀಕಿಸಿದ್ದು, ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
‘ಯಾವನೇ ಒಬ್ಬ ಮುಸ್ಲಿಂ ಆಗಲಿ, ಬ್ರಾಹ್ಮಣ ಆಗಲಿ, ಕ್ರೈಸ್ತನಾಗಲಿ ತಾನು ಇಂತಹ ಜಾತಿಗೆ ಸೇರಿದವನು ಎಂದು ಹೇಳಿಕೊಂಡರೆ ಅಂಥವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಆದರೆ, ಜಾತ್ಯತೀತರು ಎಂದು ಹೇಳಿಕೊಳ್ಳುವವರ ಬಗ್ಗೆ ಅನುಮಾನ ಮೂಡುತ್ತದೆ. ಜಾತ್ಯತೀತರಿಗೆ, ವಿಚಾರವಾದಿಗಳಿಗೆ ತಮ್ಮ ಅಪ್ಪ–ಅಮ್ಮನ ಗುರುತೇ ಇಲ್ಲ’ ಎಂದು ಹೆಗಡೆ ಟೀಕಿಸಿದ್ದಾರೆ.