ಮುಂಡಗೋಡ: ಪಟ್ಟಣದ ನ್ಯೂ ಟೌನ್‌ಹಾಲ್‌ನಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಆಧಾರ್‌ ವಿಶೇಷ ಆಂದೋಲನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಯಾರಿಗೂ ಹೇಳದೇ, ಯಾವುದೇ ಮುನ್ಸೂಚನೆ ನೀಡದೇ ಸ್ಥಗಿತಗೊಳಿಸಿರುವುದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಹಶೀಲ್ದಾರ್‌ ಜೊತೆ ವಾಗ್ವಾದ ನಡೆಸಿದರು.

ಆಧಾರ್‌ ವಿಶೇಷ ಆಂದೋಲನದ ಅಂಗವಾಗಿ ಹತ್ತು ದಿನಗಳ ಕಾಲ ಹೊಸದಾಗಿ ಆಧಾರ ಕಾರ್ಡ್‌ ಮಾಡಿಸುವುದು, ತಿದ್ದುಪಡಿ ಸೇರಿದಂತೆ ಇನ್ನಿತರ ಆಧಾರ್‌ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಕೇಂದ್ರವನ್ನು ತೆರೆಯಲಾಗಿತ್ತು. ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದರಿಂದ, ಕಂಗಾಲಾದ ಸಿಬ್ಬಂದಿ ಪೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ಕೇಂದ್ರದತ್ತ ಸುಳಿಯಲಿಲ್ಲ. ಗ್ರಾಮೀಣ ಭಾಗದಿಂದ ಬಂದಂತಹ ನೂರಾರು ಜನರು ಆಧಾರ್‌ ಕೇಂದ್ರದ ಎದುರು ಜಮಾವಣೆಗೊಂಡಿದ್ದರು. ಆದರೆ 11 ಗಂಟೆಯಾದರೂ ಕೇಂದ್ರದ ಬಾಗಿಲು ತೆರೆಯದಿರುವುದನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ತಹಶೀಲ್ದಾರ್‌ ಕಚೇರಿಯತ್ತ ಧಾವಿಸಿದರು.

RELATED ARTICLES  ಕನ್ನಡ ಸಂಘ ಹೆಮ್ಮರವಾಗಿ ಬೆಳೆಯಲಿ: ಡಾ.ಎಮ್.ಆರ್.ನಾಯಕ

‘ಆಧಾರ ಕಾರ್ಡ್‌ ಮಾಡಿಸುವುದಕ್ಕಾಗಿ ಕೂಲಿ ಕೆಲಸ ಬಿಟ್ಟು, ಮಕ್ಕಳ ಸಮೇತ ಬೆಳಿಗ್ಗೆಯೇ ಬಂದಿದ್ದೇವೆ. ಇಷ್ಟು ಸಮಯವಾದರೂ ಸಿಬ್ಬಂದಿ ಬಂದಿಲ್ಲ. ಆಧಾರ್‌ ಕಾರ್ಡ್‌ ಮಾಡುವ ಸಿಬ್ಬಂದಿಯನ್ನು ಕೂಡಲೇ ಕರೆಯಿಸಿ’ ಎಂದು ಸಾರ್ವಜನಿಕರು ಒತ್ತಾಯಿಸಿದರು. ತಹಶೀಲ್ದಾರ್‌ ಅಶೋಕ ಗುರಾಣಿ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು.

RELATED ARTICLES  ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು.

ತಾಂತ್ರಿಕ ತೊಂದರೆಯಿಂದ ಆಧಾರ್‌ ಕಾರ್ಡ್‌ ಮಾಡಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಫಲಕವನ್ನು ಕೇಂದ್ರದ ಬಾಗಿಲಿಗೆ ನಂತರ ಹಾಕಲಾಯಿತು. ‘ಆಧಾರ ಕಾರ್ಡ್‌ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಎರಡು ದಿನ ಕಾರ್ಯನಿರ್ವಹಿಸಿದ ಸಿಬ್ಬಂದಿ ಯಾರಿಗೂ ಹೇಳದೇ ಹೋಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಇನ್ನೆರಡು ದಿನದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ತಹಶೀಲ್ದಾರ್‌ ಅಶೋಕ ಹೇಳಿದರು.