ಶಿರಸಿ: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಫೆ.27ರಿಂದ ಮಾ.7ರವರೆಗೆ ನಡೆಯಲಿದೆ.
ಭಾನುವಾರ ಇಲ್ಲಿ ನಡೆದ ಧರ್ಮದರ್ಶಿ ಮಂಡಳಿ, ಬಾಬುದಾರರು, ಸಾರ್ವಜನಿಕರ ಸಭೆ ಯಲ್ಲಿ ಜಾತ್ರೆಯ ದಿನಾಂಕ ಹಾಗೂ ಮುಹೂರ್ತ ಘೋಷಿಸಲಾಯಿತು.
ಫೆ. 27ರ ರಾತ್ರಿ 11.21ರಿಂದ 11.35ರ ನಡುವಿನ ಅವಧಿಯಲ್ಲಿ ದೇವಿಯ ಕಲ್ಯಾಣ ಪ್ರತಿಷ್ಠೆ, 28ರ ಬೆಳಿಗ್ಗೆ 7.14ರಿಂದ 7.36ರ ನಡುವೆ ರಥಾರೋಹಣ, 8.51ರಿಂದ ಶೋಭಾ ಯಾತ್ರೆ ನಡೆಯಲಿದೆ. ಸೇವಾ ಕಾರ್ಯಗಳು ಮಾ.1ರ ಬೆಳಿಗ್ಗೆ 5 ಗಂಟೆಯಿಂದ ಪ್ರಾರಂಭವಾಗುತ್ತವೆ. ಮಾ.7ರ ಬೆಳಿಗ್ಗೆ 10.30ಗಂಟೆಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ವೈದಿಕ ಆಚಾರ್ಯ ಶರಣ್ ಆಚಾರ್ಯ ಪ್ರಕಟಿಸಿದರು. ಜಾತ್ರೆ ಮುಗಿದ ದಿನದಿಂದ ಮಾ.18ರ ಯುಗಾದಿಯಂದು ನಡೆಯುವ ದೇವಿಯ ಪುನರ್ಪ್ರತಿಷ್ಠಾಪನೆಯವರೆಗೆ ದೇವಾಲಯ ಬಾಗಿಲು ಮುಚ್ಚಿರುತ್ತದೆ.