ಗದಗ: ಸ್ವತಂತ್ರ ಧರ್ಮ ಮಾನ್ಯತೆ ಕುರಿತ ಅಧ್ಯಯನಕ್ಕಾಗಿ ಪರಿಣತರ ಸಮಿತಿ ರಚನೆಗೆ ಕಾರಣವಾಗಿರುವ ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವೀರಶೈವ– ಲಿಂಗಾಯತ ಜನಜಾಗೃತಿ ಸಮಾವೇಶ, ಆ ಸಮಿತಿಯನ್ನೇ ವಿಸರ್ಜಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಭಾನುವಾರ ಕೈಗೊಂಡಿತು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಂಭಾಪುರಿ, ಕಾಶಿ, ಶ್ರೀಶೈಲ ಹಾಗೂ ಉಜ್ಜಯಿನಿ ಪೀಠದ ಶ್ರೀಗಳು, ‘ವೀರಶೈವ– ಲಿಂಗಾಯತ ಎರಡೂ ಒಂದೇ. ರಾಜಕೀಯ ಸಂಚಿಗೆ ಬಲಿಯಾಗದೇ, ಒಡಕಿಗೆ ಅವಕಾಶ ಕೊಡದೇ ಕೂಡಿ ಬಾಳೋಣ’ ಎಂದು ಮನವಿ ಮಾಡಿದರು.

ನೆರೆದಿದ್ದ ಭಾರಿ ಸಂಖ್ಯೆಯ ಭಕ್ತ ಸಮೂಹ, ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಒಟ್ಟು ಎಂಟು ನಿರ್ಣಯಗಳಿಗೆ ಒಪ್ಪಿಗೆ ಸೂಚಿಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಆದಷ್ಟು ಬೇಗ ಮಹದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂಬ ನಿರ್ಣಯವೂ ಇದರಲ್ಲಿ ಸೇರಿದೆ.

‘ರಾಜಕೀಯ ಸ್ವಾರ್ಥಕ್ಕಾಗಿ ವೀರಶೈವ– ಲಿಂಗಾಯತ ಸಮಾಜದ ಹಿತ ಬಲಿ ಕೊಡುತ್ತಿರುವುದು ಖಂಡನಾರ್ಹ. ಬ್ರಿಟಿಷರು ಪ್ರಕಟಿಸಿರುವ ಗೆಜೆಟಿಯರ್‌ಗಳನ್ನು ಸಾಕ್ಷ್ಯವನ್ನಾಗಿ ಇಟ್ಟುಕೊಂಡು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕೇಳುತ್ತಿರುವುದರಲ್ಲಿ ಅರ್ಥವಿಲ್ಲ. ಬಸವಾದಿ ಶರಣರ ತತ್ವ ಹಾಗೂ ವಚನ ಸಾಹಿತ್ಯದ ಸಾರವೇ ವೀರಶೈವ ಧರ್ಮದ ತಿರುಳು. ಇದನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

RELATED ARTICLES  ಮಂಗಳ ಗ್ರಹಕ್ಕೆ ಮಾನವ ಸಹಿತ ಪ್ರಯಾಣಕ್ಕೆ ಒಂದು ಹೆಜ್ಜೆ ಸನ್ನಿಹಿತ, ಉದ್ಯಮಿ ಇಯಾನ್ ಮಸ್ಕ್ ಅವರ ಕನಸಿನ ಯೋಜನೆ

‘ಅನ್ನ, ಅಕ್ಷರ, ಆಶ್ರಯ ನೀಡಿದ ಧರ್ಮ ಇದ್ದರೆ ಅದು ಅಖಂಡ ವೀರಶೈವ–ಲಿಂಗಾಯತ ಧರ್ಮ. ಸರ್ಕಾರವೇ ಧರ್ಮ ಒಡೆಯಲು ಮುಂದಾದರೆ, ಅದಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದ ಉಜ್ಜಯಿನಿ ಪೀಠದ ಸಿದ್ಧಲಿಂಗ ದೇಶಿಕೇಂದ್ರ ಶಿವಾಚಾರ್ಯರು, ‘ಒಡಕಿಗೆ ಅವಕಾಶ ಕೊಡದಂತೆ ಕೂಡಿ ಬಾಳುತ್ತೇವೆ’ ಎಂದು ಭಕ್ತರಿಂದ ಪ್ರತಿಜ್ಞೆ ಪಡೆದರು.

‘ಅಲ್ಪಸಂಖ್ಯಾತ ಸ್ಥಾನಮಾನ ಕೊಡಿಸುವುದಾಗಿ ಕೆಲವು ಮಠಾಧೀಶರು, ರಾಜಕಾರಣಿಗಳು ವೀರಶೈವ– ಲಿಂಗಾಯತ ಸಮಾಜವನ್ನು ಒಡೆಯುವ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಈ ಪ್ರಯತ್ನ ದೇವರಾಜು ಅರಸು ಅವರ ಕಾಲದಿಂದಲೇ ಆರಂಭವಾಯಿತು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 02-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಹಾವನೂರು ಅವರು ವೀರಶೈವ ಸಮಾಜವನ್ನು 99 ಭಾಗಗಳಾಗಿ ತುಂಡು ಮಾಡಿದರು. ಈಗಿನ ಸರ್ಕಾರ ನಮ್ಮವರನ್ನೇ ನಮ್ಮೆದುರು ನಿಲ್ಲಿಸಿ, ನಮ್ಮ ಕಣ್ಣಿಗೆ ಚುಚ್ಚಿಸುತ್ತಿದೆ. ಈ ಕುತಂತ್ರಿಗಳಿಗೆ ಬುದ್ಧಿ ಕಲಿಸಬೇಕು. ಗದುಗಿನ ಸಮಾವೇಶ ನೋಡಿದ ನಂತರವಾದರೂ ಮುಖ್ಯಮಂತ್ರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

‘ಶೈವನಿಂದ ವೀರಶೈವನಾದೆ ಎಂದು ಬಸವಣ್ಣನವರೇ ಹೇಳಿರುವಾಗ ಅವರು ಲಿಂಗಾಯತ ಸ್ಥಾಪಕ ಆಗಲು ಹೇಗೆ ಸಾಧ್ಯ?, ಪುಸ್ತಕ–ಪುಟ ಬದಲಾಯಿಸಬಹುದೇ ಹೊರತು ಇತಿಹಾಸ, ಪರಂಪರೆ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಗುರು–ವಿರಕ್ತರೆಲ್ಲರೂ ಸೇರಿ ಹಾನಗಲ್ ಕುಮಾರ ಶಿವಯೋಗಿಗಳ ಕನಸನ್ನು ಸಾಕಾರಗೊಳಿಸಬೇಕು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ, ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ಶಿವಯೋಗ ಮಂದಿರದ ಅಧ್ಯಕ್ಷ ಸಂಗನಬಸವ ಶ್ರೀ, ವಿಮಲರೇಣುಕ ವೀರಮುಕ್ತಿಮುನಿ ಸ್ವಾಮೀಜಿ ಸೇರಿದಂತೆ 500ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.